ದಾವಣಗೆರೆ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸಿ ದೇಶಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಹರ್ ಘರ್ ತಿರಂಗಾ ಅಭಿಯಾನ ಆಯೋಜಿಸಲಾಗಿದ್ದು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದೆ. ಜಿಲ್ಲೆಯ ಪ್ರತಿ ಗ್ರಾಮ, ನಗರ, ಪಟ್ಟಣಗಳಲ್ಲಿ ಸ್ಥಳೀಯ ಆಡಳಿತಗಳು ಇದರ ಜವಾಬ್ದಾರಿ ವಹಿಸಿ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರಭಾತ್ ಪೇರಿ ಆಯೋಜಿಸಿ ಜನಜಾಗೃತಿ ಮೂಡಿಸಬೇಕು.
ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳನ್ನು ಹಾಡಿಸಬೇಕು. ಸ್ಥಳೀಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕ್ರೀಡಾಪಟುಗಳಿಂದ ಉಪನ್ಯಾಸ ಏರ್ಪಡಿಸಿ ಸಾರ್ವಜನಿಕರಿಗೆ ಸ್ವಾತಂತ್ರ್ಯ ಹೋರಾಟ, ತ್ಯಾಗ-ಬಲಿದಾನ ಕುರಿತು ಅರಿವು ಮೂಡಿಸಬೇಕು. ಸರ್ಕಾರಿ ಕಚೇರಿ, ಸರ್ಕಾರೇತರ ಸಂಘ-ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಕ್ರಮ ವಹಿಸಬೇಕು ಎಂದರು.
ಈ ವರ್ಷದಿಂದ ಆಗಸ್ಟ್ 1 ರಂದು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ವ್ಯಸನ ಮುಕ್ತ ದಿನವಾಗಿ ಆಚರಿಸಲು ಸರ್ಕಾರ ಆದೇಶಿಸಿದೆ. ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಂದು ಪ್ರತಿಜ್ಞಾವಿಧಿ ಬೋಧಿಸಬೇಕು. ಜಾಥಾ ಏರ್ಪಡಿಸಿ ಮಾದಕ ವಸ್ತುಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಸಭೆಯಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್, ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ, ತಿಮ್ಮಣ್ಣ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಇತರೆ ಅಧಿಕಾರಿಗಳಿದ್ದರು.