

ತೀರ್ಥಹಳ್ಳಿ: ಮುಕ್ಕಾಲು ಶತಮಾನ ಕಳೆದಿರುವ ಸ್ವಾತಂತ್ರ್ಯದ ಈ ಸಂಭ್ರಮದ ಆಚರಣೆಯಲ್ಲಿ ಪ್ರತಿಯೊಬ್ಬ ಭಾರತೀಯರೂ ಪಾಲ್ಗೊಳ್ಳುವುದಲ್ಲದೆ ಇದರ ಪ್ರತೀಕವಾಗಿ ಪ್ರತಿಯೊಂದು ಮನೆಗಳ ಮೇಲೆ ಶನಿವಾರದಿಂದ ಮೂರು ದಿನಗಳ ಪರ್ಯಂತ ರಾಷ್ಟ್ರಧ್ವಜ ರಾರಾಜಿಸುತ್ತಿರಬೇಕು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪಪಂ ಆವರಣದಲ್ಲಿ ಗುರುವಾರ ಪಪಂ ಅಧ್ಯಕ್ಷೆ ಶಬನಂ ಅವರಿಗೆ ರಾಷ್ಟ್ರಧ್ವಜವನ್ನು ನೀಡುವ ಮೂಲಕ ಸ್ವಾತಂತ್ರೃದ ಅಮೃತ ಮಹೋತ್ಸವದ ಧ್ವಜ ವಿತರಣೆಗೆ ಚಾಲನೆ ನೀಡಿದ ನಂತರ ಪಟ್ಟಣದ ಕುಶಾವತಿಯಿಂದ ಆಗುಂಬೆ ವೃತ್ತದವರೆಗೆ ಸ್ವಾತಂತ್ರ್ಯ ಜಾಥಾ ನಡೆಸಿ ಮಾತನಾಡಿದರು. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ನಾವು ಹೋರಾಟಗಾರರ ತ್ಯಾಗ, ಬಲಿದಾನವನ್ನು ಅರಿತು ಅದರ ಮಹತ್ವವನ್ನು ಮೈಗೂಡಿಸಿಕೊಳ್ಳಬೇಕಿದೆ. ಜತೆಗೆ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹನೀಯರಿಗೆ ಕೂಡ ಕೃತಜ್ಞತೆಯನ್ನು ಸಲ್ಲಿಸಬೇಕಿದೆ ಎಂದರು.
ಸುರಿಯುವ ಮಳೆಯನ್ನೂ ಲೆಕ್ಕಿಸದೇ ಸಹಸ್ರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಅಮೃತ್ ಆತ್ರೇಶ್, ತಾಪಂ ಇಒ ಶೈಲಾ, ಪಪಂ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯರಾದ ಸಂದೇಶ್ ಜವಳಿ ಹಾಗೂ ಸೊಪ್ಪುಗುಡ್ಡೆ ರಾಘವೇಂದ್ರ, ಸಹಕಾರಿ ಮುಖಂಡ ಕೆ.ನಾಗರಾಜಶೆಟ್ಟಿ ಇತರರಿದ್ದರು.