

ಚಿತ್ರದುರ್ಗ: ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ವರ್ಷಕ್ಕೆ ಕನಿಷ್ಠ 20 ತೆರೆದ ಮನೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಕ್ಕಳ ರಕ್ಷಣಾ ನೀತಿ ಕುರಿತು ಜಾಗೃತಿ ಮೂಡಿಸುವಂತೆ ಪೊಲೀಸರಿಗೆ ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಸೂಚಿಸಿದರು.
ನಗರದ ಡಯಟ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ ಕುರಿತ ಸಭೆಯಲ್ಲಿ ಮಾತನಾಡಿ, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳೊಂದಿಗೆ ಪೊಲೀಸರು ಸಂವೇದನಾಶೀಲರಾಗಿ ವರ್ತಿಸಬೇಕು. ಕಾನೂನು ಸಂಘರ್ಷಕ್ಕೆ ಸಿಲುಕಿದ ಮಕ್ಕಳ ಪೈಕಿ ಹದಿ ಹರೆಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಜಿಲ್ಲಾದ್ಯಂತ ಪ್ರೌಢಶಾಲೆಗಳಲ್ಲಿ ಮಾತ್ರ ಜಾಗೃತಿ ಕಾರ್ಯಕ್ರಮಗಳಾಗುತ್ತಿವೆ. ಆದರೆ, 18 ವರ್ಷದ ಒಳಗಿನವರೆಲ್ಲರನ್ನೂ ಮಕ್ಕಳೆಂದೇ ಪರಿಗಣಿಸಲಾಗುತ್ತದೆ. 16 ರಿಂದ 18 ವರ್ಷ ವಯೋಮಿತಿಯೊಳಗಿನ ಮಕ್ಕಳು ಕಾನೂನು ಸಂಘರ್ಷಕ್ಕೆ ತುತ್ತಾಗುವ ಸಂಭವಿರುತ್ತದೆ. ಆದ್ದರಿಂದ ಪೊಲೀಸರು ವರ್ಷದಲ್ಲಿ ಒಮ್ಮೆಯಾದರೂ ಪಿಯುಸಿ, ಐಟಿಐ, ಪ್ಯಾರಾ ಮೆಡಿಕಲ್, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ‌್ಯಕ್ರಮಗಳನ್ನು ತಪ್ಪದೇ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿ ಠಾಣೆಗಳಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿದ್ದು, ಇಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಇಲಾಖೆಗಳ ನಾಮಫಲಕ ಇರಬೇಕು. ಪ್ರತಿ ಠಾಣೆಯಲ್ಲಿ ಗುರುವಾರ ತೆರೆದ ಮನೆ ಕಾರ್ಯಕ್ರಮ ಆಯೋಜಿಸುವಂತೆ ಸರ್ಕಾರ ತಿಳಿಸಿದೆ. ಕೆಲಸದ ಒತ್ತಡದಲ್ಲಿ ಪ್ರತಿವಾರ ಕಷ್ಟವಾದರೂ ವರ್ಷಕ್ಕೆ ಕನಿಷ್ಠ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತಿಪ್ಪೇಸ್ವಾಮಿ ಹೇಳಿದರು.
ಪೋಕ್ಸೋ ಪ್ರಕರಣ: 2023ರ ಮಾರ್ಚ್‌ನಿಂದ 2025ರ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯ 19 ಠಾಣೆಗಳ ವ್ಯಾಪ್ತಿಯಲ್ಲಿ 313 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 13 ಪ್ರಕರಣಗಳನ್ನು ಜಿಲ್ಲೆಯಿಂದ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ನೈಜ 295 ಪ್ರಕರಣಗಳಲ್ಲಿ 54 ತನಿಖಾ ಹಂತದಲ್ಲಿವೆ. ಇವುಗಳಲ್ಲಿ 138 ಪೋಕ್ಸೋ ಜತೆಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಒಳಗೊಂಡಂತೆ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ 207ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 4ರಲ್ಲಿ ಶಿಕ್ಷೆಯಾಗಿದ್ದು, 53ರಲ್ಲಿ ಖುಲಾಸೆಯಾಗಿದೆ. ಎರಡು ಪ್ರಕರಣಗಳು ಪತ್ತೆಯಾಗಿಲ್ಲ. 2 ಪ್ರಕರಣಗಳಲ್ಲಿ ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಇದರ ಹೊರತಾಗಿ ಇದೇ ಅವಧಿಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 3, ಬಾಲ ಕಾರ್ಮಿಕ ನಿಷೇಧ ಕಾಯ್ದೆಯಡಿ 5 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಬೇಕೆಂದು ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರ, ದುರ್ಘಟನೆಗಳ ತಡೆಗೆ ಹಾಗೂ ಮಕ್ಕಳ ರಕ್ಷಣೆ, ಭದ್ರತೆ ಒದಗಿಸುವ ಉದ್ದೇಶದಿಂದ ಈ ಕಾಯ್ದೆ ಸಮರ್ಪಕ ಅನುಷ್ಠಾನದ ಅಗತ್ಯವಿದೆ. ಶಾಲೆಯಲ್ಲಿದೆ ಶಿಕ್ಷಣದ ಜತೆಗೆ ರಕ್ಷಣೆ ಎಂಬ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಪ್ಪೇಸ್ವಾಮಿ ಸೂಚಿಸಿದರು.
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಕುರಿತು ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹ ತಡೆಗೆ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಮೊಳಕಾಲ್ಮೂರು ತಾಲೂಕಿನಲ್ಲಿ ಬಾಲ ಕಾರ್ಮಿಕ ಪ್ರಕರಣಗಳು ಜಾಸ್ತಿ ಇವೆ ಎಂಬ ದೂರುಗಳಿದ್ದು, ಈ ಬಗ್ಗೆ ಗಮನಹರಿಸಬೇಕು. ತಹಸೀಲ್ದಾರ್ ನೇತೃತ್ವದ ಟಾಸ್ಕ್‌ಪೋರ್ಸ್ ಸಮಿತಿ ನಿಯಮಿತ ತಪಾಸಣೆ ಮಾಡಿ, ಬಾಲಕಾರ್ಮಿಕರನ್ನು ಪತ್ತೆ ಹಚ್ಚಬೇಕು ಎಂದರು.
ಜಿಲ್ಲೆ ಮಕ್ಕಳ ವಿಶೇಷ ಪೊಲೀಸ್ ಘಟಕ(ಎಸ್‌ಜೆಪಿಯು)ಅಧಿಕಾರಿಗಳ ಕಾರ್ಯವೈಖರಿಗೆ ತಿಪ್ಪೇಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದುರ್ಗ ಡಿವೈಎಸ್‌ಪಿ, ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಪಿ.ಕೆ. ದಿನಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ. ಸವಿತಾ ಮತ್ತಿತರ ಅಧಿಕಾರಿಗಳಿದ್ದರು.
----