

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಅರೆಬೆತ್ತಲೆ ಉರುಳು ಸೇವೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಶೋಕ ವೃತ್ತದಿಂದ ನಗರದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಧಾರಾಕಾರ ಮಳೆ ನಡುವೆಯೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಬೀದಿಗಿಳಿದು ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕಚೇರಿ ಎದುರು ಧರಣಿ ಕುಳಿತರು. ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಪ್ರತಿಭಟನಾಕಾರರು ಪ್ರಯತ್ನಿಸಿದರು. ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಕೆಲಹೊತ್ತು ನೂಕುನುಗ್ಗಲು ಉಂಟಾಯಿತು.
ಆಕ್ರೋಶಗೊಂಡ ರೈತರು ಬ್ಯಾರಿಕೇಡ್ ಬಿಟ್ಟು ಜಿಲ್ಲಾಧಿಕಾರಿ ಆವರಣದ ಕಬ್ಬಿಣ ಸರಳುಗಳ ಕಾಂಪೌಂಡ್ ಹಾರಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಜಿಲ್ಲಾಧಿಕಾರಿಯನ್ನು ಸ್ಥಳಕ್ಕೆ ಕರೆಯಿಸುವಂತೆ ಒತ್ತಾಯಿಸಿದ ಬಳಿಕ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿದರು.
ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿಪಡಿಸಬೇಕು. ಜತೆಗೆ ಸರ್ಕಾರಕ್ಕೆ ಪ್ರತಿ ಟನ್ ಕಬ್ಬಿಗೆ 4,500 ರೂ. ತೆರಿಗೆ ಹೋಗುತ್ತದೆ. ಸರ್ಕಾರಕ್ಕೆ ಹೋಗುವ 4,500 ರೂ. ತೆರಿಗೆ ಹಣದಲ್ಲಿ ರೈತರಿಗೆ 2,000 ರೂ. ಬೆಂಬಲ ಬೆಲೆ ಘೋಷಿಸಿ, ಒಟ್ಟಾರೆ ಟನ್ ಕಬ್ಬಿಗೆ 5,500 ರೂ. ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.
ಸರ್ಕಾರ ಘೋಷಿಸಿರುವ ಎಫ್‌ಆರ್‌ಪಿ ರೈತರಿಗೆ ಮೋಸದ ದರವಾಗಿದೆ. ಕಬ್ಬಿನ ಇತರ ಉತ್ಪನ್ನಗಳಿಂದ 27 ಸಾವಿರ ಕೋಟಿ ರೂ.ಗಳಿಗೂ ಅಧಿಕ ತೆರಿಗೆ ಪಡೆಯುವ ಸರ್ಕಾರ ಕಬ್ಬು ಬೆಳೆಯುವ ರೈತರಿಗೆ ಎಫ್‌ಆರ್‌ಪಿ ಬೆಲೆಯಲ್ಲಿ ಮೋಸ ಮಾಡುತ್ತಿದೆ. ಕಬ್ಬಿನ ಇತರ ಉತ್ಪನ್ನಗಳಿಂದ ಪಡೆಯುವ ತೆರಿಗೆಯಲ್ಲಿ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪ್ರತಿ ಟನ್ ಕಬ್ಬಿನ ಬೆಲೆ 5,500 ರೂ. ನಿಗದಿಗೊಳಿಸುವಂತೆ ರೈತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ಎಸ್.ಪಿ. ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ಸಭೆ ನಡೆಸಿದ್ದರು. ಸಭೆಯು ಸಂಪೂರ್ಣ ವಿಫಲವಾಗಿದೆ. ನಮ್ಮ ರೈತರ ಮನವಿಗೆ ಸ್ಪಂದಿಸಿಲ್ಲ. 10 ವರ್ಷಗಳಿಂದ ಕಬ್ಬಿನ ಬೆಲೆಯೂ 2,500 ರೂ.ಗಳಷ್ಟೇ ಇದ್ದು, ಉಳಿದ ಎಲ್ಲ ಬೆಳೆಗೆ, ಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ರೈತರು ಸಂಕಷ್ಟ ಎದುರಿಸಬೇಕಾಗಿದೆ.
ಕೇಂದ್ರ ಸರ್ಕಾರ ಕೂಡಲೇ ಎಫ್‌ಆರ್‌ಪಿ ನಿಗದಿಗೊಳಿಸಬೇಕು. ಅಲ್ಲದೆ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರು ಈ ಕುರಿತು ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಅಹೋರಾತ್ರಿ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಧರಣಿ ಮುಂದುವರೆಸಿದರು.
ಚೂನಪ್ಪ ಪೂಜಾರಿ, ಶಶಿಕಾಂತ ಪಡಸಲಗಿ, ಗಣಪತಿ ಈಳಗೇರ, ರಾಘವೇಂದ ನಾಯಕ, ಶಿವಾನಂದ ಮುಗಳಿಗಾಳ, ಜಗದೀಶ ದೇವರೆಡ್ಡಿ, ಮಲ್ಲಪ್ಪ ಅಂಗಡಿ, ಸುಭಾಷ ಸಿರಗೋರ, ಗಂಗಾಧರ ಮೇಟಿ, ರಾಜು ಪೌರ, ಸಂಜು ಹಾವಣ್ಣವರ, ಆಸ್ಮಾ ಎಂ., ಮಲ್ಲಿಕಾ ವಾದಿ ಇತರರಿದ್ದರು.