

ಕೋಲಾರ: ರೈತರು, ಮಹಿಳೆಯರ ಸ್ವಾವಲಂಬನೆ ಸಹಕಾರ ರಂಗದಿಂದ ಮಾತ್ರ ಸಾಧ್ಯವಿದ್ದು, ಪ್ರತಿ ಗ್ರಾಮದಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಮೂರು ಹಳ್ಳಿಗಳಿಗೊಂದು ರೈತರ ಹಾಗೂ ರೇಷ್ಮೆ ಬೆಳೆಗಾರರ ಸಹಕಾರ ಸಂಘ ಸ್ಥಾಪಿಸುವ ಅಗತ್ಯವಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಅಭಿಪ್ರಾಯಪಟ್ಟರು.
ಕರ್ನಾಟಕ ಸಹಕಾರ ಮಹಾಮಂಡಳ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ "ಸಹಕಾರ ಸಂಸ್ಥೆಗಳ ನಡುವೆ ಸಹಕಾರ ಬಲಪಡಿಸುವುದು' ವಿಷಯದಡಿ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್ ಬಂದಾಗ ಬದುಕು ಕಟ್ಟಿಕೊಳ್ಳುವುದೇ ಕಷ್ಟವಾಗಿತ್ತು, ಇಂತಹ ಸಂದರ್ಭದಲ್ಲಿ ರೈತರನ್ನು ಉಳಿಸಿದ್ದೇ ಹೈನುಗಾರಿಕೆ, ರೈತರಿಗಾಗಿಯೇ ಸಹಕಾರಿ ಸಂಸ್ಥೆಗಳನ್ನು ಕಟ್ಟಲಾಗಿದೆ ಎಂದು ತಿಳಿಸಿದರು.
ಸಹಕಾರ ರತ್ನ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತಸವಿದೆ, ನಷ್ಟದಲ್ಲಿದ್ದ ಮುಳಬಾಗಿಲು ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ ದುಸ್ಥಿತಿ ಸರಿಪಡಿಸಲು ಪಕ್ಷಬೇಧ ಮರೆತು ಎಲ್ಲರೂ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರು. ಈ ಸಂಸ್ಥೆ ಮೂಲಕ ಗೊಬ್ಬರ, ಪಡಿತರ ಮಾರಾಟ ನಡೆಸುತ್ತಿದ್ದು, ಇದನ್ನು ಉಳಿಸಿದ ಆತ್ಮತೃಪ್ತಿ ನನಗಿದೆ. 30 ಸಾವಿರ ಇದ್ದ ವಹಿವಾಟು ಇಂದು 2 ಲಕ್ಷ ದಾಟಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಭ್ರಷ್ಟಾಚಾರಮುಕ್ತ ಸಹಕಾರಿ ವ್ಯವಸ್ಥೆ ನಿಮಾರ್ಣ ಇಂದು ಅಗತ್ಯವಾಗಿದೆ. ಈ ಕ್ಷೇತ್ರದಲ್ಲಿ ಶ್ರೀನಿವಾಸಗೌಡರು ಮಾಡಿದ ಸಾಧನೆ ಮರೆಯಲು ಸಾಧ್ಯವಿಲ್ಲ, ನೇರವಾಗಿ ರೈತರು, ಮಹಿಳೆಯರಿಗೆ ನೆರವಾಗಲು ಈ ಕ್ಷೇತ್ರದಿಂದ ಮಾತ್ರವೇ ಸಾಧ್ಯ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ವಿಕಸಿತ ಭಾರತ ಧ್ಯೇಯದ ಸಹಕಾರಿ ಸಪ್ತಾಹದ ಧ್ಯೇಯ ವಿಕಸಿತ ಕೋಲಾರವೂ ಆಗಿರಲಿ, ಜಿಲ್ಲೆಯ ಸಹಕಾರಿ ಕ್ಷೇತ್ರದ ಎರಡು ಕಣ್ಣುಗಳಾಗಿರುವ ಡಿಸಿಸಿ ಬ್ಯಾಂಕ್, ಕೋಚಿಮುಲ್ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವುದು ವಿಷಾದರ ಸಂಗತಿ. ಅದರ ತಾಯಂತಿರುವ ಸಹಕಾರಿ ಯೂನಿಯನ್ ಇದನ್ನು ಸರಿಪಡಿಸುವಪ್ರಯತ್ನ ನಡೆಸಲಿ. ಕೋಲಾರ ಪತ್ರಕರ್ತರ ಸಹಕಾರ ಸಂಘ ಈಗಾಗಲೇ 50 ಸಾವಿರ ರೂ. ಸಾಲ ಸೌಲಭ್ಯ ಒದಗಿಸುತ್ತಿದ್ದು, ಶೇ.95 ವಸೂಲಾತಿ ಇದೆ. ಈ ನಿಟ್ಟಿನಲ್ಲಿ ಸಂಘದ ಸದಸ್ಯರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸಹಕಾರ ಕೋರಿದರು.
ಪತ್ರಕರ್ತ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಿವಕುಮಾರ್, ನರಸಾಪುರ ಎಸ್ಎಫ್ಸಿಎಸ್ ಅಧ್ಯಕ್ಷ ಮುನಿರಾಜು, ಯೂನಿಯನ್ ಸಿಇಒ ಕೆ.ಎಂ.ಭಾರತಿ, ಸಿಬ್ಬಂದಿ ಲಕ್ಷಿ$್ಮ ರವಿ ಇದ್ದರು.
ಸಹಕಾರಿ ಕಾಯ್ದೆ ತಿದ್ದುಪಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವ ರಾಜಣ್ಣ ಸೇರಿ ಸಹಕಾರಿ ಕಾಯ್ದೆ ತಿದ್ದುಪಡಿ ಮಾಡಿ, ಈ ರಂಗವನ್ನು ಬಲಗೊಳಿಸುವ ಯತ್ನ ನಡೆಸಿದ್ದಾರೆ. ಈ ಹೊಸ ಕಾಯ್ದೆ ಜಾರಿಯಾದರೆ 3 ವರ್ಷಗಳಿಗೊಮ್ಮೆ ಚುನಾವಣೆ, ಜಿಲ್ಲಾ ಮತ್ತು ರಾಜ್ಯ ಹಂತದಲ್ಲಿ ಮೀಸಲು ಸೌಲಭ್ಯ, ಎಲ್ಲ ವರ್ಗಗಳಿಗೂ ಅಧ್ಯಕ್ಷರಾಗುವ ಅವಕಾಶ ಇರುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹೇಳಿದರು. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಕೆ.ಶ್ರೀನಿವಾಸಗೌಡರ ನಂತರ ಅವರು ಅಭಿವೃದ್ಧಿಪಡಿಸಿದ ಸಹಕಾರಿ ತೇರನ್ನು ಶಾಸಕ ಕೊತ್ತೂರು ಮಂಜುನಾಥ್ ಮುಂದುವರೆಸಲಿ ಎಂದು ತಿಳಿಸಿದರು.