ಪ್ರತಿ ಗ್ರಾಪಂನಲ್ಲಿ ಬಿಜೆಪಿ ಧ್ವಜ ಹಾರಿಸಿ

aurad bjp meeting
Published on

ಔರಾದ್: ಗ್ರಾಪಂ ಚುನಾವಣೆ ಸಂಬಂಧ ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾ ಪ್ರಮುಖರು, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಚುನಾವಣೆ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.

ಪಕ್ಷದ ಜಿಲ್ಲಾ ಕಾರ್ಯದರ್ಶಿಯೂ ಆದ ಔರಾದ್ ತಾಲೂಕು ಚುನಾವಣಾ ಉಸ್ತುವಾರಿ ವಿಜಯಕುಮಾರ ಎಸ್.ಪಾಟೀಲ್ ಗಾದಗಿ ಉದ್ಘಾಟಿಸಿ ಮಾತನಾಡಿ, ಎಲ್ಲ ಗ್ರಾಪಂಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲ್ಲುವುದೇ ನಮ್ಮ ಏಕೈಕ ಗುರಿ. ಇದಕ್ಕಾಗಿ ಪ್ರತಿಯೊಬ್ಬರೂ ಅಗತ್ಯ ಸಿದ್ಧತೆ ನಡೆಸಬೇಕು. ಪಕ್ಷ ನಿಷ್ಠ ಕಾರ್ಯಕರ್ತರು ಹಾಗೂ ಸ್ಥಳೀಯವಾಗಿರುವ ಉತ್ತಮ ವ್ಯಕ್ತಿಗಳನ್ನು ಕಣಕ್ಕಿಳಿಸಿ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದು ಸಂಪೂರ್ಣ ಬೂತ್ ಮಟ್ಟದ ಕಾರ್ಯಕರ್ತರ ಚುನಾವಣೆ. ಪಕ್ಷದ ಎಲ್ಲ ಪದಾಧಿಕಾರಿಗಳು, ಜನಪ್ರತಿನಿಧಿಗಳು ಈ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಷ್ಠಾವಂತ ಕಾರ್ಯಕರ್ತರನ್ನು ಗೆಲ್ಲಿಸಿ ಬೂತ್ ಸಶಕ್ತಿಗೊಳಿಸಬೇಕು. ಮುಂದಿನ ವಿಧಾನಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಪಕ್ಷಕ್ಕೆ ಜಯ ತಂದುಕೊಡಲು ಈ ಚುನಾವಣೆ ಅತಿ ಮುಖ್ಯವಾಗಿದೆ ಎಂದರು.

ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಸದಸ್ಯ ಕಿರಣ್ ಪಾಟೀಲ್ ಹಕ್ಯಾಳ, ಪ್ರಮುಖರಾದ ಬಂಡೆಪ್ಪಾ ಕಂಟೆ, ಸುರೇಶ ಭೋಸ್ಲೆ ಮಾತನಾಡಿದರು. ಜಿಪಂ ಸದಸ್ಯ ಮಾರುತಿ ಚವ್ಹಾಣ್, ಸಲಾವುದ್ದಿನ್, ರಾಜಕುಮಾರ ಕುರುಡಗಿ, ಕೇರಬಾ ಪವಾರ್, ಚೆನ್ನಬಸವ ಬಿರಾದರ, ಶಿವಾಜಿರಾವ ಕಾಳೆ, ಹನುಮಂತ ಸುರನಾರ, ಖಂಡೋಬಾ ಕಂಗಟೆ, ಅಮರ್ ಜಾಧವ ಇತರರಿದ್ದರು.

ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನ ಕೊಡುವ ಏಕೈಕ ಅವಕಾಶ ಬಿಜೆಪಿಯಲ್ಲಿದೆ. ಕೇಂದ್ರ, ರಾಜ್ಯ ಸರ್ಕಾರದ ಅನೇಕ ಜನಪರ ಯೋಜನೆಗಳ ಕುರಿತು ಜನರಿಗೆ ತಿಳಿವಳಿಕೆ ಮೂಡಿಸಿ ಅವರ ಮನವೊಲಿಸಬೇಕು. ಪ್ರತಿ ಬೂತ್ಗೊಬ್ಬ ಪ್ರಮುಖರು ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡಿ, ಎಲ್ಲ ಗ್ರಾಪಂಗಳಲ್ಲೂ ಪಕ್ಷದ ಧ್ವಜ ಹಾರಾಡಿಸಬೇಕು.| ವಿಜಯಕುಮಾರ ಪಾಟೀಲ್ ಗಾದಗಿತಾಲೂಕು ಚುನಾವಣಾ ಉಸ್ತುವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net