ಪ್ರತಿ ಗ್ರಾಪಂಗೆ ಒಂದು ಹೊಸ ಕೆರೆ

17manju2a-Web
Published on

ಬೆಳಗಾವಿ: ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು, ಅಂತರ್ಜಲ ವೃದ್ಧಿ ಹಾಗೂ ರೈತರಿಗಾಗಿ ಪ್ರತಿ ಗ್ರಾಪಂಗೆ ಒಂದು ಹೊಸ ಕೆರೆ ನಿರ್ಮಾಣ ಕಡ್ಡಾಯ. ಕೆರೆ ಅಭಿವೃದ್ಧಿ ನಿರ್ಲಕ್ಷೃ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆ ನಿರ್ಮಾಣ ಯೋಜನೆ ಪ್ರಧಾನಮಂತ್ರಿಗಳ ಕನಸಿನ ಯೋಜನೆಯಾಗಿದೆ. ಕೆರೆಗಳನ್ನು ನಿರ್ವಹಣೆಗೆ ಗ್ರಾಪಂಗಳಿಗೆ ಹಸ್ತಾಂತರಿಸಲಾಗಿದೆ. ಹಾಗಾಗಿ ಅವುಗಳನ್ನು ಅಭಿವೃದ್ಧಿ ಪಡಿಸಲು ಮೊದಲ ಆದ್ಯತೆ ನೀಡಬೇಕು ಎಂದರು.

ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು, ಸದಸ್ಯರು ನರೇಗಾ ಯೋಜನೆ ಅಡಿಯಲ್ಲಿ ಗ್ರಾಪಂಗೆ ಒಂದು ಹೊಸ ಕೆರೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಜತೆಗೆ ಹಳೆ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡುವುದು ಸರಿಯಲ್ಲ. ಅಲ್ಲದೆ, ಕೃಷಿಹೊಂಡಗಳಿಂದ ರೈತರಿಗೆ ಹೆಚ್ಚಿನ ಪ್ರಯೋಜನ ವಿರುವುದರಿಂದ ಕೃಷಿ ಹೊಂಡಗಳ ನಿರ್ಮಾಣದ ನಿಗದಿತ ಗುರಿಯನ್ನು ಸಾಧಿಸಬೇಕು. ಕೆರೆಗಳ ನಿರ್ಮಾಣ ಜತೆಗೆ ಕಲ್ಯಾಣಿಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲು ಗ್ರಾಪಂಗಳು ಯೋಜನೆ ರೂಪಿಸಬೇಕು. ಕೆರೆಗಳ ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲ. ಹೊಸ ಕೆರೆ ನಿರ್ಮಾಣ ಮಾಡುವ ಸಮಗ್ರ ಮಾಹಿತಿಯನ್ನು ಜಿಪಂಗಳು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು. ಕೋವಿಡ್ ನಿಂದ ನಿಧನರಾಗಿರುವ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆದಷ್ಟು ಬೇಗನೇ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಎಲ್ಲದಕ್ಕೂ ಕೋವಿಡ್ ನೆಪ ಬೇಡ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, 2021-22ನೇ ಸಾಲಿನ ರೈತ ಕ್ರೀಯಾ ಯೋಜನೆ ಅಡಿಯಲ್ಲಿ ರೈತರಿಗೆ ಹೆಚ್ಚಿನ ಕಾಮಾಗರಿಗಳನ್ನು ಕೈಗೊಳ್ಳುವ ಅವಕಾಶ ಕಲ್ಪಿಸಿಕೊಡಬೇಕು. ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳಲು ಎಲ್ಲದಕ್ಕೂ ಕೋವಿಡ್ ನೆಪ ಹೇಳಬೇಡಿ. ರೈತ ಕ್ರಿಯಾ ಯೋಜನೆ ಅನಷ್ಠಾದ ಬಗ್ಗೆ ನಿರ್ಲಕ್ಷೃ ವಹಿಸುವ ಅಧಿಕಾರಿಗಳು ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂಸದೆ ಮಂಗಲ ಅಂಗಡಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

418 ಗ್ರಾಮಗಳು ಕೋವಿಡ್ ಮುಕ್ತ: ಜಿಲ್ಲೆಯಲ್ಲಿ 418 ಗ್ರಾಮಗಳನ್ನು ಕೋವಿಡ್‌ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ. ನಿರಂತರ ಹತ್ತು ದಿನಗಳ ಕಾಲ ಸೋಂಕು ಪತ್ತೆಯಾಗದ ಗ್ರಾಮಗಳನ್ನು ಕೋವಿಡ್‌ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ರಚಿಸಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ, ಪರ ಊರುಗಳಿಂದ ಬರುವ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಎಚ್.ವಿ. ದರ್ಶನ ತಿಳಿಸಿದರು.

5 ರಿಂದ 6 ಕೋಟಿ ಸಸಿ ಎಲ್ಲಿ ಹೋದವು?: ಪ್ರತಿವರ್ಷ ನರೇಗಾ ಯೋಜನೆಯ ಅರಣ್ಯೀಕರಣದ ಅಡಿಯಲ್ಲಿ ಸಸಿಗಳನ್ನು ನೆಡಲು ಕೋಟ್ಯಂತರ ಗುಂಡಿಗಳನ್ನು ನಿರ್ಮಾಣ ಮಾಡಿ ಸಸಿಗಳನ್ನು ನೆಡಲಾಗುತ್ತಿದೆ. ಇಷ್ಟೊತ್ತಿಗೆ ಎಲ್ಲ ಪ್ರದೇಶ ಹಸರೀಕರಣ ಆಗಬೇಕಿತ್ತು. ಆದರೆ, ಎಲ್ಲಿಯೂ ಸಸಿಗಳು, ಗಿಡಗಳು ಕಾಣುತ್ತಿಲ್ಲ.

ಹಾಗಾದರೆ ಸುಮಾರು 5 ರಿಂದ 6 ಕೋಟಿ ಸಸಿಗಳು ಎಲ್ಲಿ ಹೋದವು? ಪ್ರತಿವರ್ಷ ಗುಂಡಿ ನಿರ್ಮಿಸುವುದು ಸಸಿ ನಡೆಯುವುದು ಅಷ್ಟೇ ಕೆಲಸವಲ್ಲ. ಅವುಗಳನ್ನು ಉಳಿಸಿ ಬೆಳಸುವುದು ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚಿಸಿದರು.

ಕಿತ್ತೂರು ತಾಲೂಕು ಪ್ರತ್ಯೇಕವೆಂದು ಪರಿಗಣಿಸಿ

ಕಿತ್ತೂರು ತಾಲೂಕು ಘೋಷಣೆಯಾಗಿ ಹಲವಾರು ವರ್ಷ ಕಳೆದರೂ ಯಾವುದೇ ಯೋಜನೆ ರೂಪಿಸುವಾಗ ಕಿತ್ತೂರು ಪ್ರತ್ಯೇಕ ತಾಲೂಕು ಎಂದು ಪರಿಗಣಿಸುತ್ತಿಲ್ಲ. ಇದರಿಂದ ಕಿತ್ತೂರು ಸೌಲಭ್ಯ ವಂಚಿತವಾಗುತ್ತಿದೆ. ಆದ್ದರಿಂದ ಕಿತ್ತೂರು ತಾಲೂಕು ಪ್ರತ್ಯೇಕವಾಗಿ ಪರಿಗಣಿಸಬೇಕು. ಕುಡಿಯುವ ನೀರು ಯೋಜನೆಗಳು ಹಲವಾರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿವೆ. ಹೊಸ ಯೋಜನೆಗಳಲ್ಲಿ ಕೆಲ ಗ್ರಾಮಗಳು ತಪ್ಪುತ್ತಿವೆ. ಆದ್ದರಿಂದ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಕುಡಿಯುವ ನೀರು ಯೋಜನೆ ಜಾರಿಗೊಳಿಸುವ ಮುಂಚೆ ಸಂಬಂಧಿಸಿದ ಶಾಸಕರ ಜತೆ ಚರ್ಚಿಸಿ ಸಲಹೆ ಪಡೆದುಕೊಳ್ಳಬೇಕು. ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಳಿದಿರುವ ಗ್ರಾಮಗಳನ್ನು ಸೇರ್ಪಡೆಗೊಳಿಸಿ ಹೊಸ ಡಿಪಿಆರ್ ರೂಪಿಸುವಂತೆ ಶಾಸಕ ಮಹಾಂತೇಶ ದೊಡಗೌಡರ ಆಗ್ರಹಿಸಿದರು.

ಜಿಲ್ಲಾಧಿಕಾರಿಗೆ ಕೃತಜ್ಞತೆ

ಹಳ್ಳಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು 1 ಸಾವಿರಕ್ಕೂ ಅಧಿಕ ಎಕರೆ ಜಾಗವನ್ನು ಗ್ರಾಪಂಗಳಿಗೆ ಒದಗಿಸಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಜಾಗ ಕೊಟ್ಟಿರುವ ಜಿಲ್ಲಾಧಿಕಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕೃತಜ್ಞೆತೆ ಸಲ್ಲಿಸುತ್ತೇವೆ. ಜಿಲ್ಲಾಡಳಿತ ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಜಿಲ್ಲೆ 1308 ಹಳ್ಳಿಗಳಲ್ಲಿ 65 ಸಾವಿರಕ್ಕೂ ಅಧಿಕ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಯಾಗಿದೆ. ಅಲ್ಲದೆ, 135 ತಂಡಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿಯವರೆಗೆ 9 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net