ಪ್ರತಿ ಕ್ಷೇತ್ರದಲ್ಲೂ ಪ್ರವಾಸ ಮಾಡುತ್ತೇನೆ; ಎಚ್.ಡಿ. ದೇವೇಗೌಡ

ಪ್ರತಿ ಕ್ಷೇತ್ರದಲ್ಲೂ ಪ್ರವಾಸ ಮಾಡುತ್ತೇನೆ; ಎಚ್.ಡಿ. ದೇವೇಗೌಡ
Published on

ಹಾಸನ: ‘ಬೆಂಗಳೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಇಲ್ಲದ ಕುರಿತಾಗಲೀ, ಆಮಂತ್ರಣ ವಿಚಾರ ಕುರಿತಾಗಲಿ ನಾನು ಮಾತನಾಡ ಬಯಸುವುದಿಲ್ಲ. ಯಾರ‌್ಯಾರು ಯಾವ ಕಾರಣಕ್ಕೆ ಏನೇನು ಮಾಡಿದರು ಎಂಬ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ’ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ತಮ್ಮ ತವರು ಹೊಳೆನರಸೀಪುರ ತಾಲೂಕು ಹರದನಹಳ್ಳಿಯಲ್ಲಿ ಮನೆದೇವರು ದೇವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಲು ತೆರಳುವ ಮಾರ್ಗ ಮಧ್ಯೆ ಬೆಳಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಸ್ವಲ್ಪಕಾಲ ವಿಶ್ರಾಂತಿ ಪಡೆದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಆದ ಸುದ್ದಿಗಾರರೊಂದಿಗೆ ದೇವೇಗೌಡರು ಮಾತನಾಡಿದರು.

ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆದ ರೀತಿಯ ಕುರಿತಾಗಿ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಒಂದು ಟ್ವೀಟ್ ಮಾಡಿದ್ದರು. ಅದು ದೇಶಾದ್ಯಂತ ಚರ್ಚೆ ಆಗಿದೆ. ಅದಕ್ಕಿಂತ ನಾನು ಹೆಚ್ಚಿಗೆ ಹೇಳಲು ಹೋಗುವುದಿಲ್ಲ ಎಂದು ನುಡಿದರು.

‘ಇಡೀ ಭಾರತವನ್ನಾಳಿದ ದೇವೇಗೌಡರ ಕೊಡುಗೆಯನ್ನು ಜನರ ಮನಸ್ಸಿನಿಂದ ದೂರ ಮಾಡುವ ಉದ್ದೇಶದಿಂದಲೇ ಒಂದು ಪುಟ್ಟ ನಗರ ಕಟ್ಟಿದ್ದ ಕೆಂಪೇಗೌಡರನ್ನು ಜನರ ಮನಸ್ಸಲ್ಲಿ ಪುನರ್‌ಪ್ರತಿಷ್ಠಾಪಿಸುವ ರಾಜಕಾರಣ ನಡೆಯುತ್ತಿದೆಯೇ’ ಎಂಬರ್ಥ ಬರುವ ರೀತಿಯಲ್ಲಿ ಸುಗತ ಶ್ರೀನಿವಾಸ್ ಟ್ವೀಟ್ ಮಾಡಿದ್ದನ್ನು ಇಲ್ಲ ಸ್ಮರಿಸಬಹುದು.

‘ಮುಂದಿನ ವಾರದಿಂದ ಹಾಸನ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಪ್ರವಾಸ ಮಾಡುತ್ತೇನೆ. ಜಿಲ್ಲೆಯಲ್ಲಿ ಪಕ್ಷ ಬಲವಾಗಿದ್ದರೂ, ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಜಿಲ್ಲೆಯ ಪ್ರವಾಸದ ನಂತರ ರಾಜ್ಯ ಪ್ರವಾಸವನ್ನೂ ಕೈಗೊಳ್ಳಲಾಗುವುದು. ಆನಂತರ ಸಂಸತ್ ಅಧಿವೇಶನದಲ್ಲೂ ಭಾಗವಹಿಸುತ್ತೇನೆ. ದೇವರು ಮತ್ತು ಜನರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ’ ಎಂದು ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net