

ಚಿತ್ರದುರ್ಗ: ಪ್ರತಿ ಎರಡು ತಿಂಗಳಿಗೆ ಒಮ್ಮೆಯಾದರೂ ಪೌರಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಹೇಳಿದರು.
ಆರೋಗ್ಯ ಇಲಾಖೆಯಿಂದ ನಗರಸಭೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕರ, ಸಫಾಯಿ ಕರ್ಮಚಾರಿಗಳ ಆರೋಗ್ಯ ಸುರಕ್ಷಾ ಶಿಬಿರದಲ್ಲಿ ಮಾತನಾಡಿದರು.
ಪೌರಕಾರ್ಮಿಕರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ 2 ತಿಂಗಳಿಗೊಮ್ಮೆ ಅವರ ಆರೋಗ್ಯ ತಪಾಸಣೆ ಮೂಲಕ ಸೂಕ್ತ ಚಿಕಿತ್ಸಾ ಸಲಹೆ ನೀಡಬೇಕೆಂದು ಆರೋಗ್ಯ ಇಲಾಖೆಗೆ ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಹೆಚ್ಚು ಗಮನಹರಿಸಬೇಕೆಂದು ಹೇಳಿದರು.
ನಗರದ ಸ್ವಚ್ಛತೆ ಮೂಲಕ ರೋಗಗಳಿಗೆ ನಾಗರಿಕರು ತುತ್ತಾಗದಂತೆ ಶ್ರಮಿಸುವ ನೀವುಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ಸ್ವಚ್ಛತೆ, ಕಸ ವಿಲೇವಾರಿ ಸಂದರ್ಭ ಗ್ಲೌಸ್, ಬೂಟು, ಮಾಸ್ಕ್ ಇತರೆ ರಕ್ಷಣಾ ಪರಿಕರಗಳನ್ನು ತಪ್ಪದೆ ಉಪಯೋಗಿಸಬೇಕೆಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಎಲ್ಲ ಕಾರ್ಮಿಕರು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಂಡರೆ, 5 ಲಕ್ಷ ರೂ. ವರೆಗೆ ತಮ್ಮ, ತಮ್ಮ ಕುಟುಂಬ ಸದಸ್ಯರಿಗೆ ಉಚಿತ, ಉನ್ನತ ಮಟ್ಟದ ಚಿಕಿತ್ಸೆ ದೊರೆಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಡಿ 1 ವರ್ಷದಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಹುಟ್ಟಿನ ನ್ಯೂನತೆ, ಕುಂಠಿತ ಬೆಳವಣಿಗೆ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ, ಚಿಕಿತ್ಸೆ ಸಹಕಾರಿಯಾಗಿದೆ. ಮದ್ಯಪಾನ, ತಂಬಾಕು ಸೇವನೆಯಿಂದ ಕಾರ್ಮಿಕರು ದೂರವಿರಬೇಕು. ಶುದ್ಧ ನೀರು, ಆಹಾರ ಸೇವನೆ ಹಾಗೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳ ಬೇಕೆಂದರು.
ನಗರಸಭೆ ವ್ಯವಸ್ಥಾಪಕಿ ಮಂಜುಳಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗರಾಜ್, ಬಾಬುರೆಡ್ಡಿ, ಭಾರತಿ, ರುಕ್ಮಿಣಿ, ಪರಿಸರ ಇಂಜಿನಿಯರ್ ಜಾಫರ್, ಡಾ.ಬಿಲಾಲ್, ಡಾ.ವಾಣಿ, ಬಿ.ಮೂಗಪ್ಪ, ಬಿ.ಜಾನಕಿ, ತ್ರಿವೇಣಿ, ಲಕ್ಷ್ಮೀದೇವಿ, ರೆಹಮಾನ್, ಶಂಕರಮೂರ್ತಿ ಇತರರು ಇದ್ದರು.