

ಚಿತ್ರದುರ್ಗ: ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ, ಯುವಸಮೂಹ ಸೇರಿ ಜನರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಜಂಟಿ ಸಂಘಟನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರಮುಖ ರಸ್ತೆಗಳಲ್ಲಿ ರೈತ-ಕಾರ್ಮಿಕ ಎಚ್ಚರಿಕಾ ರ‌್ಯಾಲಿ ನಡೆಸಿದರು. ಜನ ಚಳವಳಿಗಳು ಮುಂದಿಡುತ್ತಿರುವ ಆಗ್ರಹಗಳ ಕೂಲಂಕುಷ ಚರ್ಚೆಯಾಗಬೇಕು. ಇದಕ್ಕಾಗಿ ಸಿಎಂ ಅಧ್ಯಕ್ಷತೆಯಲ್ಲಿ ಸಚಿವರನ್ನೊಳಗೊಂಡ ಮೂರು ದಿನದ ಜನತಾ ಅಧಿವೇಶನ ಕರೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ನಿತ್ಯ ಹೆಚ್ಚುತ್ತಿರುವ ಬೆಲೆ ಏರಿಕೆಯಿಂದ ದೇಶ ಮತ್ತು ರಾಜ್ಯದ ಜನ ತತ್ತರಿಸಿದ್ದರೂ ನಿಯಂತ್ರಣಕ್ಕೆ ಮುಂದಾಗದೆ, ಎರಡೂ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ. ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ಕಾರ್ಯನಿರ್ವಹಿಸುತ್ತಿವೆಯೇ ಹೊರತು ರೈತರ, ಕಾರ್ಮಿಕರ, ಬಡ-ಮಧ್ಯಮ ವರ್ಗದವರ ಹಿತ ಕಾಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯ ಬಿಜೆಪಿ ಜಾರಿಗೆ ತಂದ ಮೂರು ಕಾಯ್ದೆ ಹಿಂಪಡೆಯುವುದಾಗಿ ಹೇಳಿ ಮಾತಿಗೆ ತಪ್ಪಿ ಅನ್ಯಾಯ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಭರವಸೆಗಳೆಲ್ಲವೂ ಹುಸಿಯಾಗಿವೆ. ಬೆಳೆ ಆಯೋಗದ ವರದಿ ಮೂಲೆ ಗುಂಪಾಗಿಸಿದ್ದೀರಿ ಎಂದು ದೂರಿದರು.
ಲಕ್ಷಾಂತರ ಎಕರೆ ಭೂಮಿಯನ್ನು ಲೀಸ್ ನೆಪದಲ್ಲಿ ಪ್ಲಾಂಟರ್‌ಗಳಿಗೆ ನೀಡಲು ಹೊರಟಿದ್ದೀರಿ. ಆದರೆ, ಬಡವರ ವಸತಿಗೆ ಭೂಮಿ ಮಂಜೂರು ಮಾಡದೆ, ಸತಾಯಿಸುತ್ತಿದ್ದೀರಿ. ಇದು ಎಷ್ಟು ಸರಿ?. ಕೂಡಲೇ ನ್ಯಾಯ ದೊರಕಿಸಿಕೊಡಬೇಕು. ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಕೃಷಿಗಾಗಿ ಪಡೆದ ಸಾಲ ತೀರಿಸಲಾಗದೆ, ರೈತರು ಆತ್ಮಹತ್ಯೆ ಮಾರ್ಗ ಅನುಸರಿಸುತ್ತಿದ್ದಾರೆ. ಆದ್ದರಿಂದ ಬ್ಯಾಂಕ್‌ಗಳಿಂದ ಸಾಲ ವಸೂಲಾತಿ ನಿಲ್ಲಿಸಬೇಕು. ಸ್ವಾಮಿನಾಥನ್ ವರದಿ ಅನ್ವಯ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ತೋರಿಸುವ ಬದಲು ಭದ್ರಾ ಮೇಲ್ದಂಡೆ ಯೋಜನೆಗಾಗಿ ಘೋಷಿಸಿರುವ 5,300 ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆಗೆ ಪ್ರಯತ್ನಸಿ, ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸಿ, ಬರಪೀಡಿತ ಪ್ರದೇಶಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಬಾರದು. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗೆ ಕ್ರಮವಹಿಸಬೇಕು. ಉದ್ಯೋಗ ಸೃಷ್ಟಿಸಲು ಮುಂದಾಗಬೇಕು. ಅಸಂಘಟಿತ ಕಾರ್ಮಿಕರ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಸರ್ಕಾರಕ್ಕೆ ಕೋರಿದರು.
ಮುಖಂಡರಾದ ಕುಮಾರ್ ಸಮತಳ, ಜೆ.ಯಾದವರೆಡ್ಡಿ, ಈಚಘಟ್ಟ ಸಿದ್ಧವೀರಪ್ಪ, ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ತಿಪ್ಪೇಸ್ವಾಮಿ, ಸತ್ಯಪ್ಪ ಮಲ್ಲಾಪುರ, ಬೂಕನಕೆರೆ ಶಿವಮೂರ್ತಿ, ಕರಿಯಣ್ಣ, ಮೈಲಣ್ಣ, ಸಿ.ಕೆ.ಗೌಸ್‌ಪೀರ್, ಟಿ.ಶಫೀವುಲ್ಲಾ, ರವಿಕುಮಾರ್, ಲಕ್ಷ್ಮೀಕಾಂತ್, ನಾಗಣ್ಣ, ಮಲಿಯಣ್ಣ, ಸುರೇಶ್‌ಬಾಬು, ನಿಜಲಿಂಗಪ್ಪ, ಶಿವರುದ್ರಪ್ಪ ಇತರರಿದ್ದರು.