ಪ್ರಣಾಳಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ

17arsph2ep
ಅರಸೀಕೆರೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರಣಾಳಿಕೆ ಸಲಹಾ ಸಂಗ್ರ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಸವರಾಜ್, ಪ್ರಸನ್ನಕುಮಾರ್,ಎನ್.ಡಿ.ಪ್ರಸಾದ್,ರಮೇಶ್,ಪುರುಷೋತ್ತಮ್, ಚಂದ್ರಶೇಖರ್ ಇದ್ದರು.
Published on

ಅರಸೀಕೆರೆ: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾದರಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಯೋಜನೆ ರೂಪಿಸಲಾಗಿದೆ ಎಂದು ಪ್ರಣಾಳಿಕೆ ಜಿಲ್ಲಾ ಸಂಚಾಲಕ ಅಡಗೂರು ಬಸವರಾಜ್ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಸಮ್ಮಾನ್ ಯೋಜನೆ ಅನುಷ್ಠಾನದ ಮೂಲಕ ಉಭಯ ಸರ್ಕಾರಗಳು ವಾರ್ಷಿಕ ತಲಾ 10 ಸಾವಿರ ರೂ.ಗಳನ್ನು ಅನ್ನದಾತನ ಖಾತೆಗೆ ಜಮೆ ಮಾಡುತ್ತಿವೆ. ನಾಲ್ಕು ವರ್ಷದಿಂದ 40 ಸಾವಿರ ರೂ. ನೆರವು ಪ್ರತಿ ರೈತ ಕುಟುಂಬಕ್ಕೆ ತಲುಪಿದೆ. ಮುದ್ರಾ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ಕೊಡಿಸಲಾಗುತ್ತಿದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಸೇರಿ ಜನಪರ ಕಾರ್ಯಕ್ರಮಗಳನ್ನು ಡಬಲ್ ಇಂಜಿನ್ ಸರ್ಕಾರ ನೀಡುತ್ತಿವೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಇನ್ನಷ್ಟು ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡಿದ್ದು ರೈತರಿಗೂ ಅನುಕೂಲವಾಗುವಂತೆ ಒಂದು ಲಕ್ಷ ರೂ. ವರೆಗಿನ ಸಾಲಮನ್ನಾ ಮಾಡಬೇಕು, ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ. ನಿಗದಿ, ಹಿಂದು ಸಂಘಟನೆಗಳ ಮುಖಂಡರ ಮೇಲಿನ ಪ್ರಕರಣ ವಾಪಸ್, ನಿರುದ್ಯೋಗಿ ಪದವೀಧರರಿಗೆ ಮಾಸಾಶನ ಹೆಚ್ಚಳ ಸೇರಿ ಹಲವು ಕ್ರಮ ಕೈಗೊಂಡಲ್ಲಿ ಮತದಾರರು ಮತ್ತೊಮ್ಮೆ ಬಿಜೆಪಿಗೆ ಆಶೀರ್ವದಿಸಲಿದ್ದಾರೆ ಎನ್ನುವ ಸಲಹೆ, ಸೂಚನೆಗಳನ್ನು ನಾಗರಿಕರು ಬರೆದು ಪೆಟ್ಟಿಗೆಯಲ್ಲಿ ಹಾಕುತ್ತಿದ್ದ ದೃಶ್ಯ ಕಂಡುಬಂದಿತು. ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್, ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ನಗರಾಧ್ಯಕ್ಷ ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಚಂದ್ರಶೇಖರ್ ಯಾದವ್, ಸಿದ್ದೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net