

ಹಾಸನ: ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಲು ಆಗ್ರಹಿಸಿ ಮೇ 30 ರಂದು ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಕರೆ ನೀಡಿರುವ ಬೃಹತ್ ಪ್ರತಿಭಟನೆಗೆ ಡಾ. ಬಿ.ಆರ್ ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದಿಂದ ಬಾಹ್ಯ ಬೆಂಬಲ ನೀಡಲಿದೆ ಎಂದು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಶ್ರೀಧರ ಕಲಿವೀರ ತಿಳಿಸಿದರು.
ನಮ್ಮ ಸಂಘಟನೆ ಜನಪರ ಒಕ್ಕೂಟದೊಳಗೆ ವಿಲೀನವಾಗದೆ ಅವರ ಹೋರಾಟಕ್ಕೆ ಬಾಹ್ಯ ಬೆಂಬಲ ನೀಡುವ ಮೂಲಕ ಪೆನ್‌ಡ್ರೈವ್ ಪ್ರಕರಣ ತಾರ್ಕಿಕವಾಗಿ ಅಂತ್ಯಗೊಂಡು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡುವವರೆಗೂ ನಮ್ಮ ಹೋರಾಟ ನಡೆಯಲಿದೆ. ಕೂಡಲೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶಾಂಗ ಸಚಿವಾಲಯದ ಮೂಲಕ ಇಂಟರ್‌ಪೋಲ್ ಮೇಲೆ ಒತ್ತಡ ಹೇರಿ ವಿದೇಶದಲ್ಲಿ ಅಡಗಿ ಕುಳಿತಿರುವ ಅವರನ್ನು ಕೂಡಲೇ ಭಾರತಕ್ಕೆ ವಾಪಾಸ್ ಕರೆತರಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಂಸದ ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ದಲಿತ ಸಮುದಾಯದ ಮಹಿಳೆಯರೂ ಒಳಗಾಗಿದ್ದು, ಆತನ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಎಸ್‌ಐಟಿ ಅಧಿಕಾರಿಗಳು ಬಂಧಿಸಬೇಕು. ಈಗಾಗಲೇ ಆರೋಪಿಯನ್ನುಬಂಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಮೇ.30 ರಂದು ನಡೆಯುವ ಪ್ರತಿಭಟನೆಗೆ ರಾಜ್ಯದ 31 ಜಿಲ್ಲೆಗಳಿಂದ ನಮ್ಮ ಒಕ್ಕೂಟದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅವರು ಮಾತನಾಡಿ, ದ್ವಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ 16 ಸಾವಿರ ಮಹಿಳೆಯರನ್ನು ಮದುವೆಯಾಗಿದ್ದ ಎಂಬುವುದನ್ನು ಪುರಾಣದಲ್ಲಿ ಓದಿದ್ದೇವು. ಆದರೆ, ಕಲಿಯುಗದಲ್ಲಿ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಅತ್ಯಾಚಾರದಂತಹ ಹೀನ ಕೃತ್ಯವೆಸಗಿ ಇಡೀ ಸಮಾಜವೇ ತಲೆತಗ್ಗಿಸುವ ಹಾಗೆ ಮಾಡಿದ್ದಾನೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೂಡಲೇ ಈತನನ್ನು ಬಂಧಿಸಬೇಕು. ಕೃತ್ಯದಲ್ಲಿ ದಲಿತ ಮಹಿಳೆಯರು ದೌರ್ಜನ್ಯ ನಡೆದಿರುವ ಬಗ್ಗೆ ಸಹಾಯವಾಣಿಯಲ್ಲಿ ಅಳಲು ತೋಡಿಕೊಂಡಿರುವ ಬಗ್ಗೆ ತಿಳಿದುಬಂದಿದ್ದು, ಈ ಹಿನ್ನಲೆ ಪ್ರಜ್ವಲ್ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತ ಮಹಿಳೆಯರಿಗೆ ಸೂಕ್ತ ರಕ್ಷಣೆ, ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯರ ಬಗ್ಗೆ ಮಾತನಾಡದೆ, ಪೆನ್‌ಡ್ರೈವ್ ಹಂಚಿದವರು ಯಾರು ಎಂದು ಪ್ರಶ್ನೆ ಮಾಡುವ ಮೂಲಕ ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಬೇರೆ ಪ್ರಕರಣದಲ್ಲಿ ಬೀದಿಗಿಳಿದು ಹೋರಾಡುವ ಬಿಜೆಪಿ ಮಖಂಡರು ಯಾರೊಬ್ಬರು ಈ ಬಗ್ಗೆ ಯಾರೊಬ್ಬರು ಏಕೆ ಧ್ವನಿ ಎತ್ತುತ್ತಿಲ್ಲ. ಇವರು ಹಿಂದು ಸಮುದಾಯದ ಮಹಿಳೆಯರು ಅಲ್ಲವೇ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಯೋಜಕ ನಾರಾಯಣದಾಸ್, ಅಂಬೇಡ್ಕರ್‌ವಾದ ರಾಜ್ಯ ಸಂಘಟನಾ ಸಂಚಾಲಕ ಅಂಬುಗಮಲ್ಲೇಶ್, ರಾಜ್ಯ ಸಂಘಟನಾ ಸಂಚಾಲಕ ಶಿವಬಸಪ್ಪ, ಖಜಾಂಚಿ ಬಿ.ಎ.ಕಾಟ್ಕಿ, ಕರ್ನಾಟಕ ಎಸ್ಸಿ-ಎಸ್ಟಿ ಪದವೀಧರ ಒಕ್ಕೂಟ ಅಧ್ಯಕ್ಷ ಕೃಷ್ಣದಾಸ್, ದಲಿತ ಮುಖಂಡರಾದ ನಿಡುಗರಹಳ್ಳಿ ಸಿದ್ದಪ್ಪ, ಕೆ.ಈರಪ್ಪ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರಸನ್ನ, ಕೆ.ವೈ.ಜಗದೀಶ್ ಮತ್ತಿತರರು ಹಾಜರಿದ್ದರು.