ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ

AAP
Published on

ಚಿತ್ರದುರ್ಗ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಎಎಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಆಗ್ರಹಿಸಿದರು.

ಇದು ಗಂಭೀರ ಪ್ರಕರಣವಾಗಿದ್ದು, ನೊಂದ ಸಂತ್ರಸ್ತ ಮಹಿಳೆಯರಿಗೆ ಕೇಂದ್ರ-ರಾಜ್ಯ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

ಸ್ತ್ರೀಯರನ್ನು ಪೂಜಿಸುವ, ಗೌರವಿಸುವ ಸಂಸ್ಕೃತಿ ಭಾರತೀಯರದು. ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋ ಪ್ರಕರಣದಿಂದಾಗಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕಳಂಕ ಉಂಟು ಮಾಡಿದ್ದಾರೆ ಎಂದು ದೂರಿದರು.

ಅಧಿಕಾರದ ಪ್ರಭಾವ ಬೀರಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಹೊರಗಡೆ ಇದ್ದಷ್ಟು ಸಾಕ್ಷ್ಯ ನಾಶಪಡಿಸಲು ಹುನ್ನಾರ ನಡೆಸುತ್ತಾರೆ. ಹಣದಿಂದ ಸಂತ್ರಸ್ತರ ಬಾಯಿ ಮುಚ್ಚಿಸಲು ಪ್ರಯತ್ನಿಸಿದರೂ ಅಚ್ಚರಿ ಇಲ್ಲ. ಆದ್ದರಿಂದ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ದುಷ್ಕೃತ್ಯಗಳಿಂದ ಹೊರಬರಲು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಅನೇಕ ರಾಜಕಾರಣಿಗಳ ಪ್ರಕರಣಗಳಲ್ಲಿ ಗಂಭೀರವಾದ ಶಿಕ್ಷೆ ಆಗುತ್ತಿಲ್ಲ. ಆದ್ದರಿಂದ ಸೂಕ್ತ ತನಿಖೆ ನಡೆಸಿ ತಪ್ಪು ಯಾರೇ ಮಾಡಿದರೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೋರಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಮಾತನಾಡಿ, ಮಹಿಳೆಯರ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಬೇಕು. ಇಂತಹ ಪ್ರಕರಣ ಬೆಳಕಿಗೆ ಬಂದಾಗ ತನಿಖೆ ಚುರುಕುಗೊಳಿಸಿ, ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಪದಾಧಿಕಾರಿಗಳಾದ ಲಕ್ಷ್ಮಿ, ವಿನೋಧಮ್ಮ, ರಾಮಣ್ಣ, ಹೇಮಾ, ಕುಂಬನಾಯ್ಕ್, ಪ್ರಹ್ಲಾದ್, ರವಿ, ತಿಪ್ಪೇಶ್, ತನ್ವೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net