

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಸೇರಿದಂತೆ ದೇಶದಲ್ಲಿ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೇ ನಡೆಯುವ ಮೂಲಕ ನ್ಯಾಯಾಲಯದ ಮೇಲೆ ಜನರು ಇಟ್ಟಿರುವಂತಹ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಕಳೆದ ಲೋಕಸಭೆ ಚುನಾವಣೆ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಸಿ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಸುಪ್ರೀಂಕೋರ್ಟ್ ಬೇಗ ಇತ್ಯರ್ಥಪಡಿಸಬೇಕು. ಲೋಕಸಭೆ ಚುನಾವಣೆ ಘೋಷಣೆಯಾಗುವುದರ ಒಳಗಾಗಿಯಾದರೂ ತೀರ್ಪು ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ನ್ಯಾಯದಾನ ವಿಳಂಬವಾದರೆ ಬೇರೆಯದೇ ರೀತಿಯ ಪರಿಣಾಮ ಬೀರಲಿದೆ. ಹಾಗಾಗಿ ತ್ವರಿತ ನಿರ್ಣಯ ಆಗಬೇಕು. ಆಸ್ತಿ ವಿವರ ಮುಚ್ಚಿ ಜಯ ಗಳಿಸಿದ್ದಾರೆ ಎಂದು ವಕೀಲ ದೇವರಾಜೇಗೌಡ ಹಾಗೂ ಎ. ಮಂಜು ಇಬ್ಬರೂ ದಾವೆ ಹೂಡಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ 2023 ಸೆ.1ರಂದು ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ. ಹಾಗಾಗಿ ಅವರು ಸಂಸದರಾಗಿ ಮುಂದುವರಿಯುವಂತಿಲ್ಲ ಎಂದು ತೀರ್ಪು ನೀಡಿತ್ತು. ಅದೇ ವೇಳೆ ಸಂಸದರ ತಂದೆ ರೇವಣ್ಣ, ಸಹೋದರ ಸೂರಜ್ ಸಹ ತಪ್ಪು ಮಾಡಿದ್ದಾರೆ ಎಂದು ತೀರ್ಪುನಲ್ಲಿ ಉಲ್ಲೇಖಿಸಲಾಗಿತ್ತು ಎಂದು ಹೇಳಿದರು.
ಹೈಕೋರ್ಟ್ ಆದೇಶದ ಪ್ರಕಾರ, ಪ್ರಜ್ವಲ್ ರೇವಣ್ಣ ಮುಂದಿನ ಆರು ವರ್ಷಗಳ ಕಾಲ ಸ್ಪರ್ಧೆ ಮಾಡುವಂತಿಲ್ಲ. ಅದಾದ ಬಳಿಕ ಪ್ರಜ್ವಲ್ ರೇವಣ್ಣ ಸುಪ್ರೀಂ ಮೊರೆ ಹೋಗಿದ್ದಾರೆ. ಅಲ್ಲಿ ಅನರ್ಹ ತೀರ್ಪಿಗೆ ತಡೆ ಸಿಕ್ಕಿದೆ. ಅವರು ತಪ್ಪು ಮಾಡಿರುವುದರಿಂದ ಅವರ ವಿರುದ್ಧ ಸೋತ ತನ್ನನ್ನು ವಿಜೇತ ಎಂದು ಘೋಷಿಸಿ ಎಂಬ ಎ.ಮಂಜು ಮನವಿಗೂ ಹೈಕೋರ್ಟ್ ಸಮ್ಮತಿ ನೀಡದೆ ನೀವೂ ಅಕ್ರಮ ಮಾಡಿದ್ದೀರಿ ಎಂದು ಹೇಳಿದೆ. ಆದರೀಗ ಪ್ರಜ್ವಲ್ ಹಾಗೂ ಮಂಜು ಒಂದೇ ಪಕ್ಷದಲ್ಲಿದ್ದಾರೆ. ರಾಜಿಗಾಗಿ ಪರಸ್ಪರ ಕೈಜೋಡಿಸಿದ್ದಾರೆ. ಈಗ ದೇವರಾಜೇಗೌಡ ಒಬ್ಬರೇ ಹೋರಾಟ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ವಕೀಲ ಜನಾರ್ಧನ ಗುಪ್ತ, ತಾಪಂ ಮಾಜಿ ಅಧ್ಯಕ್ಷ ಮಾದೇಶ್ ಇತರರು ಇದ್ದರು.