ಪ್ರಜ್ವಲ್ ರೇವಣ್ಣ ಗೆಲುವು ಶತಸಿದ್ಧ:ಡಾ.ಸೂರಜ್ ರೇವಣ್ಣ ವಿಶ್ವಾಸ

ಪ್ರಜ್ವಲ್ ರೇವಣ್ಣ ಗೆಲುವು ಶತಸಿದ್ಧ:ಡಾ.ಸೂರಜ್ ರೇವಣ್ಣ ವಿಶ್ವಾಸ
Published on

ಹಾಸನ: ನಮ್ಮ ಯಾವ ಕಾರ್ಯಕರ್ತರೂ ಗೊಂದಲದಲ್ಲಿ ಇಲ್ಲ. ಲೋಕಸಭೆ ಚುನಾವಣೆ ಯಾವ ರೀತಿ ನಡೆದಿದೆ ಎಂದು ಸಭೆ ಮಾಡಿದ್ದೇವೆ. ನಿನ್ನೆಯೂ ನಾವೆಲ್ಲ ಸಭೆ ಮಾಡಿದ್ದೇವೆ. ಚುನಾವಣೆ ಯಾವ ರೀತಿ ಆಗಿದೆ ಎಂದು ಎಲ್ಲಾ ಕಾರ್ಯಕರ್ತರ ಜತೆ ಸಭೆ ಮಾಡಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೂರಕ್ಕೆ ನೂರು ಪ್ರಜ್ವಲ್ ರೇವಣ್ಣ ಅವರು ಗೆಲ್ಲುತ್ತಾರೆ ಎಂದು ಎಂಎಲ್‌ಸಿ ಡಾ.ಸೂರಜ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಖಲಾಗಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ರೇವಣ್ಣ ಅವರ ಮೇಲೆ ಸಾವಿರ ಪ್ರಕರಣ ದಾಖಲಿಸಲಿ ಅವರು ಏನೆಂದು ನಮ್ಮ ಜಿಲ್ಲೆಯ ಜನರಿಗೆ ಗೊತ್ತು. ನಮ್ಮ ತಾಲೂಕಿನ ಜನರಿಗೆ ಗೊತ್ತು. ಅಂತಹ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ.ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಾದರೂ ಮಾಡುತ್ತಾರೆ. ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿಸ್ಪರ್ಧಿ ಯಾರು ಇಲ್ಲ. ಆದ್ದರಿಂದ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ, ವೀಕ್ ಮಾಡುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಕುಟುಂಬದ ವಿರುದ್ಧ ಆರೋಪ ಮಾಡುವವರ ಬಗ್ಗೆ ಕಿಡಿಕಾರಿದರು.
ಪ್ರಕರಣ ಸಂಬಂಧ ಎಸ್‌ಐಟಿ ರಚನೆಯಾಗಿದೆ. ಅದು ಯಾವ ಉದ್ದೇಶಕ್ಕೋಸ್ಕರ ರಚನೆಯಾಗಿದೆ. ಅದರಲ್ಲಿ ಏನು ಸಾಬೀತಾಗುತ್ತೆ ಕಾದು ನೋಡೋಣ ಎಂದ ಅವರು, ಪ್ರಜ್ವಲ್ ವಿದೇಶದಿಂದ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ ಹೇಳಿದರು.
ನಮ್ಮ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಳೆದ ಜನವರಿಯಲ್ಲಿ ಭೇಟಿ ಮಾಡಿದ್ದೆ. ನಾನು ಈ ಜಿಲ್ಲೆಯ ಜನಪ್ರತಿನಿಧಿ. ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರ, ಗ್ರಾಂಟ್ಸ್ ಮತ್ತು ಎನ್‌ಒಸಿ ವಿಷಯವಾಗಿ ಭೇಟಿ ಮಾಡಿದ್ದೆ. ಅದನ್ನು ನೀವೇ ಪ್ರಸಾರ ಮಾಡಿದ್ದೀರಿ. ಆಗಲೂ ರೇವಣ್ಣ ಕುಟುಂಬ ಕಾಂಗ್ರೆಸ್‌ಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸೃಷ್ಟಿ ಮಾಡಲಾಗಿತ್ತು. ಈ ಊಹಾಪೋಹಗಳನ್ನೆಲ್ಲಾ ಬಿಟ್ಟುಬಿಡಿ. ನಾನು ಕಳೆದ ಎರಡು ತಿಂಗಳಿನಿಂದ ಕ್ಷೇತ್ರದಲ್ಲಿಯೇ ಇದ್ದೇನೆ. ಎಲ್ಲಿಗೂ ಹೋಗಿಲ್ಲ. ಬೆಂಗಳೂರಿಗೂ ಕೂಡ ಹೋಗಿಲ್ಲ. ಹೀಗಿರುವಾಗ ಡಿ.ಕೆ.ಶಿವಕುಮಾರ್ ಅವರನ್ನು ಹೇಗೆ ಭೇಟಿ ಮಾಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net