

ಮೈಸೂರು: ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ಪ್ರಜ್ವಲ್ ದೇವರಾಜ್ ಅಭಿನಯದ ‘ವೀರಂ’ ಚಿತ್ರ ಏ.7 ರಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಖದರ್ ಕುಮಾರ್ ಹೇಳಿದರು.
ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿ. ಚಿತ್ರದಲ್ಲಿ ಮಾಸ್ ಜತೆಗೆ ಎಮೋಷನಲ್ ಕತೆಯೂ ಇದೆ. ಅಕ್ಕ, ತಮ್ಮಂದಿರ ಪ್ರೀತಿ, ಕಾಳಜಿ ಹಾಗೂ ಆಕಾಂಕ್ಷೆಯನ್ನು ತೋರುವ ಭಾವನಾತ್ಮಕ ಚಿತ್ರ ಇದಾಗಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದಲ್ಲಿ ರಚಿತಾರಾಮ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ತಾರಾಂಗಣದಲ್ಲಿ ಶ್ರೀನಗರ ಕಿಟ್ಟಿ, ಶೃತಿ, ಅಚ್ಯುತ್ ಕುಮಾರ್, ಶಿಷ್ಯದೀಪಕ್, ಚಿರಾಗ್ ಜಾನಿ, ಬಾಲರಾಜವಾಡಿ, ಮೈಕೋ ನಾಗರಾಜ್, ಗಿರೀಶ್ ಜತ್ತಿ, ಸ್ವಾತಿ ಸೇರಿದಂತೆ ಹಲವು ನಟಿಸಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ ಎಂದರು.
ನಟ ಶ್ರೀನಗರ ಕಿಟ್ಟಿ ಮಾತನಾಡಿ, ಚಿತ್ರದಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಅಣ್ಣನ ಪಾತ್ರದಲ್ಲಿ ನಾನು ಕಾಣಿಸಿಕೊಂ ಡಿದ್ದೇನೆ. ಯಾವುದೇ ಉತ್ತಮ ಪಾತ್ರ ದೊರೆತರೂ ನಾನು ನಟಿಸುತ್ತೇನೆ. ನಾಯಕ ನಟನಾಗಿಯೇ ನಟಿಸಬೇಕು ಅಂತೇನು ಇಲ್ಲ ಎಂದು ಹೇಳಿದರು.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಇದು ಬೆಂಗಳೂರು ಎಪಿಎಂಸಿ ಸುತ್ತಮುತ ನಡೆಯುವ ಕತೆಯಾಗಿದೆ. ಕನ್ನಡದಲ್ಲಿ ಮಾತ್ರ ಈ ಚಿತ್ರ ತೆರೆ ಕಾಣಲಿದೆ. ಬೇರೆ ಭಾಷೆಯವರು ಸಹ ಈ ಚಿತ್ರವನ್ನು ಕೇಳುತ್ತಿದ್ದು, ಬೇರೆ ಭಾಷೆಯಲ್ಲಿ ಈ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದುವರೆಗೆ ಮಾಡಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕೆ.ಎಂ. ಶಶಿಧರ್, ನಟರಾದ ದೀಪಕ್, ಗಿರೀಶ್ ಇದ್ದರು.