

ಬೀರೂರು: ರಾಮಾಯಣ ಕಾಲದ ರಾಜಕೀಯ ತತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಪುರಸಭೆ ಸದಸ್ಯ ಬಿ.ಆರ್.ಮೋಹನ್‌ಕುಮಾರ್ ತಿಳಿಸಿದರು.
ಪುರಸಭೆಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಪ್ರಜಾರಾಜ್ಯ ಎನ್ನುವುದು ಮಹರ್ಷಿ ವಾಲ್ಮೀಕಿಯ ಕನಸು. ರಾಮಾಯಣ ಮಹಾಕಾವ್ಯದಲ್ಲಿ ಶ್ರೀರಾಮನ ಪ್ರಜಾಪ್ರೇಮ, ಸಹೋದರ ಪ್ರೇಮ, ಕುಟುಂಬದವರಿಗೆ ನೀಡಿದ ಗೌರವ ಮೊದಲಾದ ಮೌಲ್ಯಗಳು ಪ್ರಜಾರಾಜ್ಯದ ತಳಹದಿಯೇ ಆಗಿವೆ ಎಂದರು.
ಸದ್ಯ ಮಾನವೀಯ ಮೌಲ್ಯಗಳನ್ನು ಮರೆತು ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಧಕ್ಕೆ ತರುವಂಥ ಪರಿಸ್ಥಿತಿ ಇದೆ. ಪ್ರಜಾಪ್ರಭುತ್ವ ಮತ್ತೆ ರಾಜಪ್ರಭುತ್ವದ ಕಡೆಗೆ ತಿರುಗುತ್ತಿರುವ ಸಂಕೀರ್ಣ ಸನ್ನಿವೇಶ ಉದ್ಭವಿಸಿದೆ. ಪ್ರಜಾಪ್ರಭುತ್ವ ಸಾರ್ವಭೌಮತ್ವ ಪಡೆದುಕೊಳ್ಳುವಂತೆ ಪ್ರಜಾಪ್ರತಿನಿಧಿಗಳ ನಡವಳಿಕೆ ಇರಬೇಕಾಗುತ್ತದೆ. ಆದ್ದರಿಂದ ನಾವು ಆದರ್ಶ ರಾಮನ ಪ್ರತೀಕವಾಗಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್ ಮಾತನಾಡಿ, ಆದಿಕವಿ ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿ ನಿಸ್ವಾರ್ಥ ಸೇವೆ, ಬದ್ಧತೆ, ಪ್ರಜೆಗಳನ್ನೇ ಸರ್ವ ಸಂಪತ್ತೆಂದು ಭಾವಿಸಬೇಕಾಗಿರುವ ಹುದ್ದೆ ರಾಜನದ್ದು. ಅಂದು ಪ್ರಜೆಗಳಿಗೆ ಯಾವ ನ್ಯಾಯವೋ ರಾಜನಿಗೂ ಅದೇ ನ್ಯಾಯವಾಗಿತ್ತು. ಇದು ವಾಲ್ಮೀಕಿಯ ರಾಮನ ಪಾತ್ರದಲ್ಲಿ ಕಂಡದ್ದು. ಆದರ್ಶ ರಾಜ ಎನ್ನುವುದಕ್ಕಿಂತ ಆದರ್ಶ ಪ್ರಜಾ ಸೇವಕ ಎಂದು ಬಣ್ಣಿಸಿದರು.
ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರಘು, ಸದಸ್ಯೆ ಸಹನಾ, ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿದರು. ಸದಸ್ಯರಾದ ಎಂ.ಪಿ.ಸುದರ್ಶನ್, ಲಕ್ಷ್ಮಣ್, ಪುರಸಭೆ ಆರ್‌ಒ ಶಿಲ್ಪಾ, ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ದೀಪಕ್, ಇಂಜಿನಿಯರ್ ವೀಣಾ, ಸ್ವರೂಪಾ, ರವಿ, ಸಿಬ್ಬಂದಿ ಇದ್ದರು.