ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲಕ್ಕೆ ಮಾತ್ರ ಗೌರವ

30rajesh2
Published on

ಚಾಮರಾಜನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲಕ್ಕೆ ಮಾತ್ರ ಗೌರವವಿದ್ದು, ಈ ನಿಟ್ಟಿನಲ್ಲಿ ಬಲಗೈ ಜಾತಿಗಳು ಒಗ್ಗಟ್ಟಾಗುವ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಬೇಕಿದೆ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಹಿಂದುಳಿದ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬಲಗೈ ಸಂಬಂಧಿತ ಜಾತಿಗಳು ಜಾತಿ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಎಂದು ಬರೆಸಬಾರದು. ಕಡ್ಡಾಯವಾಗಿ ಪರಿಶಿಷ್ಟ ಜಾತಿ ಎಂದು ನಮೂದಿಸಬೇಕು. ಉಪಜಾತಿ ಕಾಲಂನಲ್ಲಿ ಹೊಲಯ ಹಾಗೂ ಧರ್ಮದ ಕಾಲಂನಲ್ಲಿ ಬೌದ್ಧಧರ್ಮವನ್ನು ಬರೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಮೈಸೂರು ಮಾಜಿ ಪೌರ ಪುರುಷೋತ್ತಮ್, ಹಿರಿಯ ಹೋರಾಟಗಾರ ವೆಂಕಟರಮಣಸ್ವಾಮಿ, ಐಎ್ಎಸ್ ಮಾಜಿ ಅಧಿಕಾರಿ ಡಾ.ರಾಜು, ಜಿ.ಪಂ ಮಾಜಿ ಸದಸ್ಯ ಕಮಲ್‌ರಾಜ್ ಹಾಗೂ ಗಡಿ ಯಜಮಾನರು ಹಾಜರಿದ್ದರು.

ಬೌದ್ಧ ಎಂದರೇ ಸಮಸ್ಯೆಯಾಗದು:

ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮದಲ್ಲಿ ಪರಿಶಿಷ್ಟ ಜಾತಿಯನ್ನು ನಮೂದಿಸಿದರೇ ಮೀಸಲಾತಿ ಪಡೆದುಕೊಳ್ಳಲು ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಸಚಿವ ಎನ್.ಮಹೇಶ್ ಸ್ಪಷ್ಟಪಡಿಸಿದರು. ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸುವಲ್ಲಿ ಕೆಲವರು ಗೊಂದಲ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಸಂವಿಧಾನದಲ್ಲಿ ತಿದ್ದುಪಡಿ ಮಾಡಿದ್ದು, ಬೌದ್ಧ ಎಂದು ಬರೆಸಿದರೇ ಯಾವುದೇ ಸಮಸ್ಯೆಯಾಗುವುದಿಲ್ಲ ಸಮುದಾಯ ಇದರಲ್ಲಿ ಯಾವುದೇ ಗೊಂದಲವನ್ನು ಇಟ್ಟುಕೊಳ್ಳುವುದು ಬೇಡ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದೆ. ಇದೇ ವೇಳೆ ಒಳಮೀಸಲಾತಿಯ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ನಾವು ಗಟ್ಟಿಯಾಗಿ ನಿಲ್ಲಬೇಕಿದೆ. ಕೇಂದ್ರ ಸರ್ಕಾರ ನಡೆಸಲಿರುವ ಸಮೀಕ್ಷೆಯಲ್ಲೂ ನಾವು ಇದನ್ನು ಪುನರಾವರ್ತಿಸಬೇಕಿದೆ ಎಂದರು.

ಬಲಗೈ ಸಮುದಾಯದ ಗೊಂದಲವನ್ನು ನಿವಾರಣೆ ಮಾಡಿಕೊಳ್ಳಲು ಈ ವೇದಿಕೆ ಅತ್ಯಂಣತ ಸಹಕಾರಿಯಾಗಿದೆ. ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಅಧ್ಯಕ್ಷತೆಯ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ನಿರ್ಧಾರದಂತೆ ನಾವೆಲ್ಲರೂ ಸಮೀಕ್ಷೆಯಲ್ಲಿ ಬೌದ್ಧ ಧರ್ಮ, ಪರಿಶಿಷ್ಟಜಾತಿ ಮತ್ತು ಹೊಲಯ ಎಂದು ನಮೂದಿಸಬೇಕಿದೆ.

ಅಯ್ಯನಪುರ ಶಿವಕುಮಾರ್, ಸದಸ್ಯ, ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net