

ದೊಡ್ಡಬಳ್ಳಾಪುರ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಪ್ರಜೆಗಳಿಗಿಂತ ಮಿಗಿಲಾದವರು ಬೇರೆ ಯಾರೂ ಇಲ್ಲ, ಯಾವುದೇ ಆಮಿಷಗಳಿಗೆ ಬಲಿಯಾಗದೆ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ಹೆಮ್ಮೆಯಿಂದ ಚಲಾಯಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಗರದ ಪಾಲನಜೋಗಿಹಳ್ಳಿಯಲ್ಲಿ ಬುಧವಾರ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಜನಪರ ಆಡಳಿತ ನೀಡುತ್ತಿದ್ದು, ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ, ಕೋವಿಡ್‌ನಂಥ ರಾಷ್ಟ್ರೀಯ ವಿಪತ್ತಿನ ಸಮಯದಲ್ಲೂ ಸರ್ಕಾರಗಳು ಪಾರದರ್ಶಕ ಅಡಳಿತದಿಂದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಜನಸ್ನೇಹಿ ಆಡಳಿತ ನೀಡುತ್ತಿವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದಲ್ಲಿಲ್ಲ, ಇಂಥ ಸಂದರ್ಭಗಳಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಗೆದ್ದರೆ ನಿರೀಕ್ಷೆಯಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗದಿರಬಹುದು. ಮತದಾರರು ಕ್ಷಣಿಕ ಆಮಿಷಗಳಿಗೆ ಒಳಗಾಗದೆ ಮತಚಲಾಯಿಸಬೇಕು ಎಂದರು.
ತೋಳ್ಬಲ-ಹಣಬಲಗಳು ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡುತ್ತವೆ, ಇಂಥ ಸಂದರ್ಭದಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕಿನ ಮೂಲಕ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪಾರದರ್ಶಕ ಅಡಳಿತಕ್ಕೆ ಅವಕಾಶ ಮಾಡಿಕೊಡಬೇಕು, ಅಭಿವೃದ್ಧಿ ಪರವಾಗಿ ಚಿಂತನೆ ಮಾಡಿದರಷ್ಟೆ ಉತ್ತಮ ಅಭ್ಯರ್ಥಿಗಳ ಆಯ್ಕೆ ಸಾಧ್ಯವಾಗಲಿದೆ ಎಂದರು.
ಸಚಿವರಿಂದ ಅಂಬೇಡ್ಕರ್ ಸ್ಮರಣೆ: ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣೆ ಮೂಲಕ ಗಮನ ಸೆಳೆದರು. ಚುನಾವಣಾ ಭಾಷಣದುದ್ದಕ್ಕೂ ಅಂಬೇಡ್ಕರ್ ಗುಣಗಾನ ಮಾಡಿದ ಸಚಿವರು ಸಂವಿಧಾನದ ಪ್ರಮುಖಾಂಶಗಳು ಹಾಗೂ ಸಂವಿಧಾನಕ್ಕೆ ಸಲ್ಲಿಸಬೇಕಾದ ಗೌರವದ ಬಗ್ಗೆ ಮಾತನಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದರು.
ಸುಮಾರು 15 ದೇಶಗಳ ಸಂವಿಧಾನಗಳನ್ನು ಅವಲೋಕಿಸಿ ಅದರಲ್ಲಿನ ಸಾಧಕ ಬಾಧಕಗಳನ್ನು ಜರಡಿ ಮಾಡಿ ಜಾತ್ಯಾತೀತ ರಾಷ್ಟ್ರದಲ್ಲಿ ಅಳವಡಿಸಬೇಕಾದ ಪ್ರಮುಖ ಅಂಶಗಳನ್ನು ಸೇರಿಸಿ ವಿಶ್ವವೇ ಬೆರಗಾಗುವಂತಹ ಸಂವಿಧಾನವನ್ನು ಅಂಬೇಡ್ಕರ್ ಭಾರತೀಯರಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು. ಸಾಮಾಜಿಕ ನ್ಯಾಯ, ಜಾತ್ಯಾತೀತತೆ, ಸಮಾನತೆ ಮೂಲಕ ಸಂವಿಧಾನಕ್ಕೆ ಗೌರವ ಸಲ್ಲಿಸುವ ಮೂಲಕ ಡಾ.ಅಂಬೇಡ್ಕರ್ ಅವರ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.