ಪ್ರಜಾಪ್ರಭುತ್ವದ ಅಮೂಲ್ಯ ಹಕ್ಕು ಮತದಾನ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಕರೆ, ಜಿಪಂ ಕಚೇರಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

1
Published on

ಬೆಂಗಳೂರು ಗ್ರಾಮಾಂತರ: ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಪ್ರತಿ ಪ್ರಜೆಗೆ ಪ್ರಜಾಪ್ರಭುತ್ವ ನೀಡಿರುವ ಅತ್ಯಮೂಲ್ಯವಾದ ಹಕ್ಕು ಮತದಾನ. 18 ವರ್ಷ ಪೂರೈಸಿದ ಯುವಜನತೆ ಮತದಾನಕ್ಕೆ ಹೆಸರು ನೋಂದಣಿ ಮಾಡಿಸಿ, ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ದೇವನಹಳ್ಳಿ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದರು. ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಆಗಿರುವ ತಂತ್ರಜ್ಞಾನ ಆಧಾರಿತ ಬದಲಾವಣೆ ಇಡೀ ಪ್ರಪಂಚಕ್ಕೆ ಮಾದರಿ. ಪ್ರತಿ ಚುನಾವಣೆಯಲ್ಲಿ ಜವಾಬ್ದಾರಿಯುತ ಮತದಾರರಾಗಿ ಹಕ್ಕನ್ನು ಚಲಾಯಿಸಬೇಕು ಎಂದು ತಿಳಿಸಿದರು.

ಮತದಾನವನ್ನು ಖಾತ್ರಿ ಪಡಿಸುವ ಯಂತ್ರದಲ್ಲಿ ಮತದಾರರು ಹಾಕಿದ ಮತವನ್ನು ವೀಕ್ಷಿಸಲು ಅವಕಾಶವಿದೆ. ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕು ಆಗಿರುವುದರಿಂದ, ಮತದಾನ ಮಾಡುವ ಮೂಲಕ ಸೂಕ್ತ ಆಭ್ಯರ್ಥಿಗಳನ್ನು ಆಯ್ಕೆ ಮಾಡಬಹುದಾಗಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ, ಸ್ವೀಪ್ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ವಿಜಯಾ ಇ.ರವಿಕುಮಾರ್, ಯುವ ಮತದಾರರಿಗೆ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲೆಯಲ್ಲಿನ ಉತ್ತಮ ಬಿಎಲ್‌ಒ ಮತ್ತು ಇಎಲ್ಸಿ ಗಳಿಗೆ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು.

ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು ಹಾಗೂ ರಾಜ್ಯಮಟ್ಟದ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಲಾವಣ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೃತಿಕ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net