ಪ್ರಜಾಪ್ರಭುತ್ವ ವ್ಯವಸ್ಥೆ ತೆಗೆಯಲು ಬಿಜೆಪಿ ಪ್ರಯತ್ನ

06Rajesh4
Published on

ಚಾಮರಾಜನಗರ: ಬಿಜೆಪಿ ಬಹಳ ದೂರದೃಷ್ಟಿ ಇಟ್ಟುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೆಗೆಯಲು ಪ್ರಯತ್ನ ಮಾಡುತ್ತಿದೆ. ಹಾಗಾಗಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಬೇಕಾದ ದೊಡ್ಡ ಜವಾಬ್ದಾರಿ ಯುವಕರ ಮೇಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಬುಧವಾರ ಭೇಟಿ ನೀಡಿದ್ದ ಅವರು ಮಾತನಾಡಿ, ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತದೆ. ಋಣಾತ್ಮಕ ವಿಚಾರಕ್ಕೂ ದೊಡ್ಡಮಟ್ಟದಲ್ಲಿ ಕೌಂಟರ್ ಕೊಡುತ್ತಿದೆ. ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಮತ ಕೇಳುತ್ತಿಲ್ಲ. ಮುಸ್ಲಿಮರು, ಪಾಕಿಸ್ತಾನದ ಹೆಸರಿನಲ್ಲಿ ಮತ ಕೇಳುತ್ತಿದೆ. ಸಂವಿಧಾನ ಉಳಿಸುವ ಬದಲು ಅವರ ಐಡಿಯಾಲಜಿ ತುಂಬಲು ಪ್ರಯತ್ನ ಮಾಡುತ್ತದೆ ಎಂದು ಕಿಡಿಕಾರಿದರು.

ಅಂಬೇಡ್ಕರ್ ಕೇವಲ ಎಸ್ಸಿ/ಎಸ್ಟಿ ಜನಾಂಗಕ್ಕೆ ಸೀಮಿತವಲ್ಲ. ಬದಲಾಗಿ ಎಲ್ಲ ಭಾರತೀಯರಿಗೂ ಸೇರಿದ್ದಾರೆ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಬಳ್ಳಾರಿ ಭಾಗದಲ್ಲಿ ಪಕ್ಷ ಸಂಘಟನೆಯಾಗಲು ಲಾಡ್ ಕುಟುಂಬ ಕಾರಣ. ಕಾರ್ಮಿಕ ಖಾತೆ ನಿಭಾಯಿಸುವುದು ಸುಲಭವಲ್ಲ. ಕಾರ್ಮಿಕರಿಗೆ ಸರ್ಕಾರದ ಯೋಜನೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ ಮಾಡಿ ಅದನ್ನು ಕಾರ್ಮಿಕರಿಗೆ ನೀಡಿದರೆ ಅನುಕೂಲವಾಗುತ್ತದೆ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಜಿಲ್ಲೆ ಚಾಮರಾಜನಗರ. ಸಿಎಂ ಸಿದ್ದರಾಮಯ್ಯ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಿದ್ದರಿಂದ ಯುವಕ-ಯುವತಿಯರಿಗೆ ಉದ್ಯೋಗ ಸಿಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಸಚಿವ ಸಂತೋಷ್‌ಲಾಡ್‌ಗೆ ಮುಖಂಡರು ಮತ್ತು ಕಾರ್ಯಕರ್ತರು ಸನ್ಮಾನ ಮಾಡಿದರು. ಪ್ರಧಾನ ಕಾರ್ಯದರ್ಶಿ ಬಸವರಾಜು, ಧರ್ಮಸೇನಾ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ, ಕಾರ್ಮಿಕ ವಿಭಾಗದ ಪಂಕಜಾ, ಮುಖಂಡರಾದ ಮಹೇಶ್, ಉಮೇಶ್, ನವೀನ್, ಆರ್.ಮಹದೇವು, ಯೋಗೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net