

ಆಲೂರು: ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕಾದರೆ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲೂಕು ಸ್ವೀಪ್ ಸಮಿತಿಯಿಂದ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿಧಾನಸಭಾ ಮತದಾನ ಜಾಗೃತಿ ಆಂದೋಲನದ ಸೈಕಲ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಪ್ಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಮತದಾನ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ಜನಪ್ರತಿನಿಧಿಯ ಆಯ್ಕೆಯ ಹಕ್ಕು ನಿಮಗೆ ನೀಡಲಾಗಿದ್ದು, ಆಸೆ, ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಬೇಕು ಎಂದರು.
ಚುನಾವಣೆಯಲ್ಲಿ ಶೇ.ನೂರಕ್ಕೆ ನೂರರಷ್ಟು ಕಡ್ಡಾಯವಾಗಿ ಮತದಾನವಾಗಬೇಕೆಂಬ ಉದ್ದೇಶದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಜಾಗೃ ಮೂಡಿಸುವಂತೆ ಪಿಡಿಒಗಳಿಗೆ ತಿಳಿಸಲಾಗಿದೆ ಎಂದರು.
ತಾಲೂಕು ಪಂಚಾಯಿತಿ ಎ.ಡಿ.ಪಿ ಆರ್ ಮಹಮ್ಮದ್, ಪಿಡಿಒಗಳಾದ ಪರಮೇಶ್, ಧನಂಜಯ್, ರುದ್ರಗೌಡ, ಶಿವಕುಮಾರ್, ಶಂಭುಲಿಂಗಪ್ಪ ಇತರರಿದ್ದರು.