ಪ್ರಜಾಪ್ರಭುತ್ವ ದಿನಾಚರಣೆ 15ರಂದು

CTD MANAVA SARAPALI
Published on

ಚಿತ್ರದುರ್ಗ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆ.15ರ ಜಿಲ್ಲಾದ್ಯಂತ 145 ಕಿ.ಮೀ. ಮಾನವ ಸರಪಳಿ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಕಾರ‌್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ರಚಿಸುವ ಮಾನವಸರಪಳಿಯಲ್ಲಿ ಅಂದಾಜು 1.20 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆ ಜನರು ಸ್ವಯಂಪ್ರೇರಿತರಾಗಿ ಭಾಗವಹಿಸಿದಾಗ ಕಾರ್ಯಕ್ರಮ ಅರ್ಥಪೂರ್ಣವಾಗಲಿದೆ ಎಂದರು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಂಘ-ಸಂಸ್ಥೆಗಳ ಸದಸ್ಯರು, ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಕಡ್ಡಾಯವಾಗಿ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ‌್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಜಿಲ್ಲೆ ಗಡಿಭಾಗ ಮೊಳಕಾಲ್ಮೂರು ತಾಲೂಕು ಮೇಲಿನಕಣಿವೆ ಗ್ರಾಮದಿಂದ ಹಿರಿಯೂರು ತಾಲೂಕು ಜವಗೊಂಡನಹಳ್ಳಿವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಮಾನವ ಸರಪಳಿ ನಿರ್ಮಿಸಲಾಗುತ್ತಿದ್ದು, ಜಿಲ್ಲೆಯ ಉಳಿದ ಮೂರು ತಾಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ಸಾರ್ವಜನಿಕರು ಈ ಕಾರ‌್ಯಕ್ರಮಕ್ಕೆ ಕೈ ಜೋಡಿಸಬೇಕೆಂದರು.
ರಾಜ್ಯಾದ್ಯಂತ ಅಂದು ಬೆಳಗ್ಗೆ 9.30ರಿಂದ 10.30ರ ವರೆಗೆ ಏಕಕಾಲಕ್ಕೆ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತದೆ. ಸಸಿ ನೆಡುವುದು ಹಾಗೂ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮವೂ ಇರುತ್ತದೆ. ಮಾನವ ಸರಪಳಿ ನಿರ್ಮಾಣ ಗಿನ್ನಿಸ್ ದಾಖಲೆಯಾಗಲಿದ್ದು, ಇದರ ಯಶಸ್ವಿಗೆ ವಿಶೇಷ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಬೀದರ್‌ನಿಂದ ಚಾಮರಾಜನಗರದವರೆಗೆ, ಅಂದಾಜು 25 ಲಕ್ಷ ಜನರು ಮಾನವ ಸರಪಳಿ ರಚಿಸುವ ಮೂಲಕ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಸಮಾನತೆ, ಸ್ವಾತಂತ್ರ್ಯ ಮತ್ತು ಭಾತೃತ್ವದ ಆದರ್ಶಗಳು ಸಂವಿಧಾನ ಪೀಠಿಕೆ ಭಾಗವಾಗಿದ್ದು, ಈ ಅಂಶಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕಾಳಜಿಯಿಂದ ಮಾನವ ಸರಪಳಿ ನಿರ್ಮಾಣ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯವನ್ನು ಗೌರವಿಸುವಂತಹ ವಿಭಿನ್ನ ಕಾರ್ಯಕ್ರಮವಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ನಾಯಕನಹಟ್ಟಿ ಪಪಂ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net