ಪ್ರಜಾಧ್ವನಿ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

HUN-FEB-7-1(CONG MEETING)
ಹುಣಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯನ್ನು ಶಾಸಕ ಎಚ್.ಪಿ,ಮಂಜುನಾಥ್ ಉದ್ಘಾಟಿಸಿದರು. ಮುಂಖಡರಾದ ನಾರಾಯಣ್, ದೇವರಾಜ್, ರಮೇಶ್, ಬಸವರಾಜಪ್ಪ ಇದ್ದರು.
Published on

ಹುಣಸೂರು: ಸಿದ್ದರಾಮಯ್ಯ ಸರ್ಕಾರದ ಜನಪರ ಯೋಜನೆಗಳು ಮತ್ತು ಪಕ್ಷದ ಇತ್ತೀಚಿನ ಘೋಷಣೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಮೂಲಕ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಶಾಸಕ ಎಚ್.ಪಿ. ಮಂಜುನಾಥ್ ಸಲಹೆ ನೀಡಿದರು.

ಪ್ರಜಾಧ್ವನಿ ಯಾತ್ರೆ ಫೆ.15ರಂದು ಹುಣಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇಲ್ಲಿನ ನಗರಸಭಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನಿಷ್ಠ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಬೇಕು ಎಂದರು.

ತಾಲೂಕಿನ ಪ್ರತಿ ಗ್ರಾಮ, ಬೂತ್‌ನಿಂದ ಮುಖಂಡರು, ಕಾರ್ಯಕರ್ತರು ಆಗಮಿಸಬೇಕು. ಪ್ರಸ್ತುತ ಬಿಜೆಪಿ ಸರ್ಕಾರದ ವೈಫಲ್ಯ, ಜನವಿರೋಧಿ ಆಡಳಿತವನ್ನು ಮತದಾರರಿಗೂ ಮನಮುಟ್ಟುವಂತೆ ಮಾಡಬೇಕು ಎಂದರು.

ಭಾಗ್ಯದಾತನ ಯೋಜನೆಗಳನ್ನು ತಿಳಿಸಿರಿ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕೆಲಸ, ಭಾಗ್ಯದಾತನ ವಿವಿಧ ಯೋಜನೆಗಳನ್ನು ತಿಳಿಸುವುದರ ಜತೆಗೆ ಹಾಗೂ ಮುಂದೆ ಕಾಂಗ್ರೆಸ್ ಸರ್ಕಾರ ಬಂದಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ 2000 ರೂ., ತಲಾ ಹತ್ತು ಕೆ.ಜಿ.ಉಚಿತ ಅಕ್ಕಿ ಯೋಜನೆ ಸೇರಿದಂತೆ ಇತರ ಯೋಜನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಪಕ್ಷದ ಮುಖಂಡರಾದ ಹಂದನಳ್ಳಿ ಸೋಮಶೇಖರ್, ಗದ್ದಿಗೆ ದೇವರಾಜ್, ಕೆಂಡಗಣ್ಣ, ಗಾಗೇನಹಳ್ಳಿ ಕುಮಾರ್, ಹೊನ್ನಪ್ಪ, ಅಜ್ಗರ್ ಪಾಷಾ ಸುರೇಶ್ ಸೇರಿದಂತೆ ಇತರ ಮುಖಂಡರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಲಹೆ ನೀಡಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ವಿ.ನಾರಾಯಣ್ ಕಲ್ಕುಣಿಕೆ ರಮೇಶ್, ದೇವರಾಜ್, ಕಾರ್ಯಾಧ್ಯಕ್ಷ ಪುಟ್ಟರಾಜು, ಬಸವರಾಜಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಡೋನಾಲ್ಡ್, ರಾಜೀವ್ ಗಾಂಧಿ ಸಂಘಟನೆ ಮುಖ್ಯಸ್ಥ ಹುಂಡಿಮಾಳ ಸುರೇಶ್, ಮಹಿಳಾ ಘಟಕ ಅಧ್ಯಕ್ಷ ಶೋಭಾ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗುಂಡರವಿ ಹಾಗೂ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ನಗರಸಭಾ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಉದ್ಯಮಿ ಎಚ್.ಪಿ.ಅಮರನಾಥ್, ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net