

ಸಂಡೂರು: ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ ಎಂದು ಬಿಕೆಜಿ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಬಿ.ನಾಗನಗೌಡ ಹೇಳಿದರು.
ಕೃಷ್ಣಾನಗರದಲ್ಲಿರುವ ಬಿಕೆಜಿ ಶಿಕ್ಷಣ ಸಂಸ್ಥೆಯ ಶಾಲಾ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವದಲ್ಲಿ ಭಾನುವಾರ ಮಾತನಾಡಿದರು. ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಮೂಲ ಅಡಿಪಾಯವೇ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವಾಗಿದೆ. ಪ್ರತಿ ಪ್ರಜೆಗೆ ಶಿಕ್ಷಣ, ಧಾರ್ಮಿಕ, ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಡಲು ಪ್ರಯತ್ನ ಮಾಡಲಾಗುತ್ತಿದೆ. ಸಮ ಸಮಾಜ ನಿರ್ಮಾಣ ಭಾರತದ ಗುರಿಯಾಗಿದ್ದು, ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಗೌರವಿಸಬೇಕು ಹಾಗೂ ಪಾಲಿಸಬೇಕು ಎಂದರು.
ಇಳಕಲ್‌ನ ಪ್ರಖ್ಯಾತ ಶಿಶುರೋಗ ತಜ್ಞ ಡಾ.ಪವನ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಹಾಗೂ ಸಂವಿಧಾನದ ಮಹತ್ವ ವಿವರಿಸಿದರು. ವಿದ್ಯಾರ್ಥಿಗಳು ನಿರ್ಮಿಸಿದ್ದ ಗ್ರಾಮೀಣ ಮಾರುಕಟ್ಟೆ, ಫನ್ ಫೇರ್, ಪೊಲೀಸ್ ಠಾಣೆ ಮತ್ತು ರೈಲು ನಿಲ್ದಾಣಗಳು ಗಮನ ಸೆಳೆದವು. ಸಂಸ್ಥೆಯ ಸಂಸ್ಥಾಪಕಿ ಕಮಲಮ್ಮ, ಡಾ.ರಶ್ಮಿ, ಪ್ರಾಂಶುಪಾಲ ಕೆ.ವಿ.ಮೋಹನ್ ರಾವ್ ಇತರರಿದ್ದರು.