ಪ್ರಚಾರಕ್ಕಾಗಿ ಬಂದ್ ಮಾಡುವುದು ಸರಿಯಲ್ಲ

25-klr-3 altranative
Published on

ಕೋಲಾರ: ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟ ಸುಟ್ಟಿರುವುದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವುದು ಖಂಡನೀಯ. ಇಂತಹ ಘಟನೆಗಳು ಮುಂದುವರಿದಂತೆ ಕನ್ನಡಿಗರೆಲ್ಲರೂ ಒಟ್ಟಾಗಿ ಚಿಂತನೆ ಮಾಡಬೇಕೇ ಹೊರತು ಕರ್ನಾಟಕ ಬಂದ್‌ನಿಂದ ಪ್ರಯೋಜನವಿಲ್ಲ ಎಂದು ನಟ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್‌ಸ್ವಾಮಿ ಹೇಳಿದರು.

ತಮ್ಮಅಭಿನಯದ ರೈಡರ್ ಚಿತ್ರ ವೀಕ್ಷಿಸಲು ಶನಿವಾರ ಕೋಲಾರದ ನಾರಾಯಣಿ ಚಿತ್ರ ಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ನೈತಿಕ ಬೆಂಬಲ ನೀಡುವೆ. ರಾಜ್ಯದ ಜನತೆ ಈಗಾಗಲೇ ಕರೊನಾ ಇನ್ನಿತರ ಕಾರಣಗಳಿಂದ ತೊಂದರೆ ಅನುಭವಿಸಿರುವುದರಿಂದ ಕರ್ನಾಟಕ ಬಂದ್ ಮಾಡಿದಲ್ಲಿ ನಮ್ಮ ಜನರಿಗೆ ನಾವೇ ತೊಂದರೆ ನೀಡಿದಂತಾಗುವುದಿಲ್ಲವೆ ಎಂದು ಪ್ರಶ್ನಿಸಿದರು.

ಪ್ರಚಾರಕ್ಕಾಗಿ ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ, ರಾಜ್ಯದ ಮೇಲಿನ ದೌರ್ಜನ್ಯ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕನ್ನಡ ಚಲನಚಿತ್ರ ನಟರು ಎಂದೆಂದಿಗೂ ಕನ್ನಡ ನೆಲ, ಜಲದ ರಕ್ಷಣೆಗೆ ಬದ್ಧರಾಗಿದ್ದೇವೆ. ಕನ್ನಡಪರ ಸಂಘಟನೆಗಳು ನಾಡು ರಕ್ಷಿಸುವ ವಿಚಾರದಲ್ಲಿ ಕಾಳಜಿ ತೋರುತ್ತಿರುವುದು ಶ್ಲಾಘನೀಯ. ಆದರೆ ಪದೇಪದೆ ಬಂದ್ ಮಾಡುವುದರಿಂದ ಬಡ ಜನರಿಗೆ ಆಗುವ ತೊಂದರೆಗಳ ಬಗ್ಗೆಯೂ ಚಿಂತಿಸುವುದು ಸೂಕ್ತ ಎಂದು ತಿಳಿಸಿದರು. ರೈಡರ್ ಚಿತ್ರದ ನಿರ್ದೇಶಕ ವಿಜಯಕುಮಾರ್ ಕೊಂಡ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ನಗರಸಭೆ ಸದಸ್ಯ ರಾಕೇಶ್, ಎಪಿಎಂಸಿ ಪುಟ್ಟರಾಜು ಇನ್ನಿತರರು ಇದ್ದರು.

ಅಭಿಮಾನಕ್ಕೆ ಹರ್ಷ: ರೈಡರ್ ಚಿತ್ರಕ್ಕೆ ರಾಜ್ಯಾದ್ಯಂತ ಸಿಕ್ಕಿರುವ ಒಳ್ಳೆಯ ಪ್ರತಿಕ್ರಿಯೆಗೆ ಹರ್ಷ ವ್ಯಕ್ತಪಡಿಸಿದ ನಿಖಿಲ್, 2 ವರ್ಷಗಳ ಪರಿಶ್ರಮಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು. ಇನ್ನು ಮುಂದೆಯೂ ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸುವೆ, ರಾಜ್ಯದಲ್ಲಿ ಕನ್ನಡ ಚಿತ್ರಗಳಿಗೆ ಜನರ ಬೆಂಬಲ ಹೆಚ್ಚಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net