ಪ್ರಚಾರ, ಇತರೆ ಕಾರ್ಯಗಳಿಗೆ ಅನುಮತಿ ಕಡ್ಡಾಯ

Published on

ಬಳ್ಳಾರಿ : ಸಂಡೂರು ಉಪಚುನಾವಣೆ ಹಿನ್ನಲೆ ಸಾರ್ವಜನಿಕ ಸಭೆ, ಸಮಾರಂಭ, ರ‌್ಯಾಲಿ ನಡೆಸಲು, ಕಟ್ಟಡ ಬಳಕೆ, ವಾಹನ ಹಾಗೂ ಇತರೆ ನಿಯಮಗಳಿಗೆ ಸುವಿಧಾ ತಂತ್ರಾಂಶ ಮೂಲಕ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು. ಸಂಡೂರು ಕ್ಷೇತ್ರದಲ್ಲಿ ತಮ್ಮ ಪಕ್ಷದ ಚಿನ್ಹೆಯ ವಾಹನ, ಫ್ಲೆಕ್ಸ್ ಹಾಗೂ ಇನ್ನಿತರೆ ರಾಜಕೀಯ ಸಂಬಂಧ ಬ್ಯಾನರ್‌ಗಳಿದ್ದಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು, ಈ ಕುರಿತು ತಮ್ಮ ಪಕ್ಷದ ಮುಖಂಡರುಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಬೇಕು ಎಂದರು.
ಸಂಡೂರು ಭಾಗದಲ್ಲಿ ಸಾಕಷ್ಟು ಕಾರ್ಖಾನೆ ಪ್ರದೇಶಗಳಿದ್ದು, ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದಂತೆ ಪ್ರತಿಯೊಬ್ಬರಿಗೂ ಮತ ಚಲಾಯಿಸುವಂತೆ ಪ್ರೇರೇಪಿಸುವ ಕರ್ತವ್ಯ ಜಿಲ್ಲಾಡಳಿತ ನಿರ್ವಹಿಸುತ್ತದೆ. ಅದರಂತೆ ಪಕ್ಷದವರು ಮತ ಯಾಚಿಸಲು ಚುನಾವಣೆ ಆಯೋಗದ ನಿರ್ದೇಶನದಂತೆ ಇರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವರಿಕೆ ಮಾಡಿದರು.
ಎಸ್ಪಿ ಡಾ. ವಿ. ಜೆ. ಶೋಭರಾಣಿ ಮಾತನಾಡಿ, ರಾಜ್ಯದಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷದ ಮುಖಂಡರುಗಳು ಯಾವುದೇ ಅಹಿತಕರ ಘಟನೆಗಳಿಗೆ ಅಸ್ಪದ ನೀಡಬಾರದು. ಕಳೆದ ಬಾರಿ ಚುನಾವಣೆಯಂತೆ ಪಾರದರ್ಶಕವಾಗಿ ನಡೆಸಲು ಕೈಜೋಡಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net