

ಎಚ್.ಡಿ.ಕೋಟೆ: ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನೆಕಾರರು, ಪರಿಶಿಷ್ಟ ಜಾತಿ ಹಾಗೂ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿ ಈ ವಗರ್ದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ನಡೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಘೋಷಣೆ ಮಾಡಿದ 5 ಗ್ಯಾರಂಟಿಗಳನ್ನು ಜಾರಿ ಮಾಡುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಿಟ್ಟ ಹಣದಲ್ಲಿ ಸುಮಾರು 11 ಸಾವಿರ ಕೋಟಿ ರೂ.ಗಳನ್ನು ಐದು ಯೋಜನೆಗಳ ಜಾರಿಗಾಗಿ ಬಳಕೆ ಮಾಡುವ ಮೂಲಕ ಈ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಸರ್ಕಾರ ಈ ವರ್ಗಕ್ಕೆ ಮೀಸಲಿಟ್ಟ ಹಣವನ್ನು ಅವರ ಅಭಿವೃದ್ಧಿಗಾಗಿ ಮಾತ್ರ ಬಳಕೆ ಮಾಡಬೇಕು. ಕೂಡಲೇ ಈ ಬಗ್ಗೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಜವರಯ್ಯ, ವಿಜಯಕುಮಾರ್, ಹೆಗ್ನೂರು ನಿಂಗರಾಜು, ಸಣ್ಣಕುಮಾರ್ ಕೆಎಂ.ಹಳ್ಳಿ, ಈವನ್ ರಾಜ್, ನಾಗರಾಜು, ಮೀನಾಕ್ಷಿ, ಬಸವರಾಜು ಇದ್ದರು.