

ಎಚ್.ಡಿ.ಕೋಟೆ: ಬೆಂಗಳೂರಿನ ಜೈನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಿರುನಾಟಕ ಪ್ರದರ್ಶನದಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನಾ ಧರಣಿ ನಡೆಯಿತು.
ದೇಶದಲ್ಲಿ ನಿತ್ಯ ಅಂಬೇಡ್ಕರ್ ಅವರಿಗೆ ಅವಮಾನವಾಗುವ ಘಟನೆಗಳು ನಡೆಯುತ್ತಿದೆ. ದಲಿತರ ಮೇಲೆ ಹಲ್ಲೆ, ಅತ್ಯಾಚಾರ ನಡೆಯುತ್ತಿದ್ದರೂ ಸರ್ಕಾರಗಳು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ಪ್ರಗತಿಪರ ಮುಖಂಡ ಚೌಡಳ್ಳಿ ಜವರಯ್ಯ ದೂರಿದರು.
ಜೈನ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಬೇಕು, ಜತೆಗೆ ಕಿರು ನಾಟಕ ಮಾಡಿಸಿದ, ನಾಟಕ ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಸದಸ್ಯರಾದ ಸಿ.ಮಾರುತಿ, ಮುದ್ದು ಮಲ್ಲಯ್ಯ, ಹೈರಿಗೆ ಶಿವರಾಜು, ಚಾ. ಶಿವಕುಮಾರ್, ಸೋಗಹಳ್ಳಿ ಶಿವಣ್ಣ, ಪುರಸಭಾ ಸದಸ್ಯ ಪ್ರೇಮ್ ಸಾಗರ್, ಆನಗಟ್ಟಿ ದೇವರಾಜು, ಪುಟ್ಟ ಮಾದು, ಬೆಟ್ಟಸ್ವಾಮಿ, ಜೀವಿಕ ಬಸವರಾಜು, ಕೋಟೆ ಸೋಮಣ್ಣ, ಲಿಂಗರಾಜು, ಆಟೋ ಕುಮಾರ್, ರಾಜಯ್ಯ, ತೇಜಿ, ಮರಿದಾಸಯ್ಯ ಇದ್ದರು.