

ಬೇಲೂರು: ಸುಪ್ರಿಂಕೋರ್ಟ್ ಮುಖ್ಯ ನಾಯಾಮೂರ್ತಿ ಬಿ.ಆರ್.ಗವಾಯಿ ಕಡೆಗೆ ಶೂ ಎಸೆದು ಅವಮಾನ ಮಾಡಿರುವ ವಕೀಲ ರಾಖೇಶ್ ಕಿಶೋರ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿರುವ ಡಾ.ಅಂಬೇಡ್ಕರ್ ಮಾಲಾರ್ಪಣೆ ಸಲ್ಲಿಸಿ, ವಕೀಲನ ವಿರುದ್ಧ ಘೋಷಣೆ ಕೂಗಿ ಬಸವೇಶ್ವರ ವೃತ್ತದವರೆಗೆ ಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟಿಸಿದರು.
ಮಾನವ ಹಕ್ಕು ಆಯೋಗದ ತಾಲೂಕು ಗೌರವಾಧ್ಯಕ್ಷ ಹಾಗೂ ನಿವೃತ್ತ ಸೈನಿಕ ವೆಂಕಟೇಶ್‌ಗೌಡ ಮಾತನಾಡಿ, ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲ ರಾಕೇಶ್ ಕಿಶೋರ್‌ಶೂ ಎಸೆಯಲು ಯತ್ನಿಸಿ ಅವಮಾನಿಸಿರುವುದನ್ನು ಖಂಡಿಸುತ್ತೇವೆ. ಅಲ್ಲದೆ ಇದು ನ್ಯಾಯಾಂಗ ನಿಂದನೆಯಾಗಿದ್ದು, ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಆದ್ದರಿಂದ ಈ ವಕೀಲನನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಫಾ.ಜೋಸೆಫ್ ಮಾತನಾಡಿ, ಬಿ.ಆರ್.ಗವಾಯಿ ಅವರ ಕಡೆಗೆ ಶೂ ಎಸೆದ ವಕೀಲನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸ್ವಾತಂತ್ರ್ಯ ಬಂದು 78 ವರ್ಷವಾದರೂ ಮನುವಾದಿಗಳ ಮನಸ್ಸು ಇನ್ನೂ ಬದಲಾಗಿಲ್ಲ. ಜಾತಿಯ ಮನಸ್ಸು ಇನ್ನೂ ಉಳಿದಿದೆ ಎನ್ನುವುದಕ್ಕೆ ಇದು ಸಾಕ್ಷಿ. ಸಮಾಜ ಒಡೆಯಲು ಮುಂದಾಗುವವರ ವಿರುದ್ಧ ಕ್ರಮ ಕೈಗೊಂಡು ವಕೀಲನನ್ನು ದೇಶದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಒತ್ತಾಯಿಸಿದರು.
ದಸಂಸ(ಅಂಬೇಡ್ಕರ್ ವಾದ)ವಿಭಾಗಿಯ ಸಂ.ಸಂಚಾಲಕ ಲಕ್ಷ್ಮಣ್ ಮಾತನಾಡಿ, ಬಿ.ಆರ್.ಗವಾಯಿ ಕಡೆಗೆ ಶೂ ಎಸೆದ ವಕೀಲನ ನಡೆ ಸಂವಿಧಾನ ವಿರೋಧಿಯಾಗಿದ್ದು, ಆತನ ವಿರುದ್ಧ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳು ಕ್ರಮಕ್ಕೆ ಮುಂದಾಗುವ ಮೂಲಕ ಮುಂದೆ ಇಂತಹ ಘಟನೆಗಳು ನಡೆಯದಂತೆ ಮಾಡಬೇಕು. ವಕೀಲನ ಮೇಲೆ ನ್ಯಾಯಾಂಗ ನಿಂದನೆ ಹಾಗೂ ದೇಶ ದ್ರೋಹದ ಕೇಸು ದಾಖಲಿಸಿ, ದೇಶದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಹೀಂ, ಗೌರವಾಧ್ಯಕ್ಷ ನವೀದ್ ಪಾಷಾ, ಉಪಾಧ್ಯಕ್ಷ ವಾಜಿದ್, ಮಾನವ ಹಕ್ಕು ಆಯೋಗದ ಜಿಲ್ಲಾಧ್ಯಕ್ಷ ಎಂ.ಜಿ.ನಿಂಗರಾಜು, ಮುಖಂಡರಾದ ಕಲಾವಿದ ಏಜಸ್‌ಪಾಷಾ, ಅಬ್ದುಲ್ ಖಾದರ್, ನೂರ್ ಅಹಮದ್, ದಸಂಸ ಮುಖಂಡರಾದ ನಿಂಗರಾಜು, ದೇವರಾಜು, ಪರ್ವತಯ್ಯ, ರಮೇಶ್, ಶಶಿಧರ್‌ಮೌರ್ಯ, ಗೋವಿನಹಳ್ಳಿ ರವಿ, ಹೊಯ್ಸಳ ಸೇರಿದಂತೆ ಇತರರಿದ್ದರು.