

ಸೋಮವಾರಪೇಟೆ: ಸಂಬಾರ ಪದಾರ್ಥಗಳ ರಾಣಿ ಎಂದೇ ಕರೆಸಿಕೊಳ್ಳುವ ಏಲಕ್ಕಿ ಪ್ರಗತಿಪರ ಕೃಷಿಕ ಕುಟುಂಬವನ್ನು ಕೈಹಿಡಿದು ಸಲಹುತ್ತಿದೆ.
ಕೃಷಿ ನಷ್ಟ ಎಂದು ರೈತರು, ಕಾಫಿ ಉದ್ಯಮದ ಕಡೆಗೆ ವಾಲುತ್ತಿರುವ ಸಂದರ್ಭದಲ್ಲಿ ಸತತ ನಷ್ಟದಿಂದ ಕಂಗಾಲಾಗದೆ, ಮರಳಿ ಯತ್ನವ ಮಾಡು ಎಂಬಂತೆ ಏಲಕ್ಕಿ ಕೃಷಿಯಲ್ಲಿ ಲಾಭ ಕಂಡುಕೊಂಡಿದ್ದಾರೆ ತಾಕೇರಿ ಗ್ರಾಮದ ಎನ್.ಟಿ.ಸುಬ್ಬಯ್ಯ-ದಿವ್ಯಾ ದಂಪತಿ.
5 ದಶಕಗಳ ಹಿಂದೆ ಕೊಡಗಿನಲ್ಲಿ ಏಲಕ್ಕಿ ಬೆಳೆಯುವವರೇ ಪ್ರಗತಿಪರ, ಶ್ರೀಮಂತ ಕೃಷಿಕರು ಎಂದು ಕರೆಸಿಕೊಳ್ಳುವ ಕಾಲವಿತ್ತು. ಆ ಸಂದರ್ಭದಲ್ಲಿ ಸುಬ್ಬಯ್ಯ ಅವರ ತಂದೆ 3ರಿಂದ4 ಸಾವಿರ ಕೆ.ಜಿ ಏಲಕ್ಕಿ ಫಸಲು ತೆಗೆಯುತ್ತಿದ್ದರು. ನಂತರದ ವರ್ಷಗಳಲ್ಲಿ ಕಟ್ಟೆ, ಕೊಳೆರೋಗ ತಗುಲಿ ಏಲಕ್ಕಿ ತೋಟಗಳು ರೋಗಪೀಡಿತವಾದವು.
ಏಲಕ್ಕಿ ನಷ್ಟ ತರುವಾಯ ಕೃಷಿಕರು ಕಾಫಿ, ಕಾಳುಮೆಣಸು ಬೆಳೆಯತ್ತ ವಾಲಿದರು. ಮುಕ್ತಮಾರುಕಟ್ಟೆಯಾದ ಮೇಲೆ ಕಾಫಿ ಉದ್ಯಮ ಅತ್ಯಂತ ಲಾಭದಾಯಕವಾಯಿತು. ಕೊಡಗಿನಲ್ಲಿ ಏಲಕ್ಕಿ ಬೆಳೆಯುವುದು ಕಷ್ಟಸಾಧ್ಯ ಎನ್ನುವಂತಾಯಿತು. ಅತಿ ಹೆಚ್ಚು ಏಲಕ್ಕಿ ಬೆಳೆಯುತ್ತಿದ್ದ ಶಾಂತಳ್ಳಿ, ಸುಂಠಿಕೊಪ್ಪ ಹೋಬಳಿಯ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಲಕ್ಕಿ ಕೃಷಿ ಇಲ್ಲದಂತಾಯಿತು. ಪ್ರಸಕ್ತ ಅಲ್ಪಸ್ವಲ್ಪ ಏಲಕ್ಕಿ ಬೆಳೆಯಲಾಗುತ್ತಿದೆ.
ಕಾಫಿ, ಕಾಳುಮೆಣಸು, ಬಾಳೆ, ಕೃಷಿಯಲ್ಲಿ ಒಂದಷ್ಟು ಲಾಭವನ್ನು ಕಂಡ ಪ್ರಗತಿಪರ ಕೃಷಿಕ ಸುಬ್ಬಯ್ಯ ಅವರು, ಕೇರಳ ಮೂಲದ ನೆಲ್ಯಾಣಿ ಗೋಲ್ಡ್ ಹೆಸರಿನ ಹೈಬ್ರೀಡ್ ಏಲಕ್ಕಿ ತಳಿ ಬೆಳೆಯಲು ತೀರ್ಮಾನಿಸಿದರು. ತನ್ನ ತಂದೆಯ ಕಾಯಕವಾದ ಕೃಷಿಯನ್ನು ಮುಂದುವರಿಸಬೇಕೆಂದು ಪಣತೊಟ್ಟರು.
17 ವರ್ಷದ ಹಿಂದೆ 7ನೇ ಹೊಸಕೋಟೆಯಿಂದ ಕೇರಳದ ಕೃಷಿಕ ಶಶಿಧರ್ ಎಂಬುವರಿಂದ ನೆಲ್ಯಾಣಿ ತಳಿಯ 25 ತಂಡೆ(ಬುಡ)ಗಳನ್ನು ತಂದು ತಾಕೇರಿ ಗ್ರಾಮದ ತಮ್ಮ ಭೂಮಿಯಲ್ಲಿ ನೆಟ್ಟು ದಂಪತಿ ಆರೈಕೆ ಮಾಡಿದರು. ಬೆಲೆ ಇಲ್ಲದಿದ್ದರೂ, ನಷ್ಟವಾದರೂ ಎದೆಗುಂದಲಿಲ್ಲ. ಆದರೀಗ 7 ಎಕರೆ ಜಾಗದಲ್ಲಿ ಏಲಕ್ಕಿ ಸಮೃದ್ಧವಾಗಿ ಬೆಳೆದಿದೆ. ಮೂರು ಸಾವಿರ ಬುಡಗಳಲ್ಲಿ ಫಸಲು ತೆಗೆಯುತ್ತಿದ್ದಾರೆ. ಕೆಲ ವರ್ಷ ಒಂದು ಕೆ.ಜಿ.ಏಲಕ್ಕಿಯನ್ನು 600 ರೂ.ಗೂ ಮಾರಿದ್ದಾರೆ. ಒಮ್ಮೆ ಕೆ.ಜಿ.ಗೆ ನಾಲ್ಕೂವರೆ ಸಾವಿರ ರೂ.ಗೂ ಮಾರಾಟ ಮಾಡಿರುವ ಉದಾಹರಣೆ ಉಂಟು. ವಾರ್ಷಿಕವಾಗಿ ಎರಡರಿಂದ ನಾಲ್ಕು ಸಾವಿರ ಕೆ.ಜಿ. ಏಲಕ್ಕಿ ಫಸಲು ತೆಗೆಯುತ್ತಿದ್ದಾರೆ. ಸೋಮವಾರಪೇಟೆ ತಾಲೂಕು ಮಟ್ಟಿಗೆ ಅತಿ ಹೆಚ್ಚು ಏಲಕ್ಕಿ ಬೆಳೆಯುವ ಕೃಷಿಕರಾಗಿದ್ದಾರೆ.
ಸ್ಥಳೀಯ ಏಲಕ್ಕಿ ತಳಿಗಳಲ್ಲಿ ಒಂದು ಬುಡದಲ್ಲಿ ನೂರು ಗ್ರಾಂನಿಂದ, ಅರ್ಧ ಕೆ.ಜಿ.ಯಷ್ಟು ಫಸಲು ಸಿಗುತ್ತದೆ. ಆದರೆ ನೆಲ್ಯಾಣಿ ಬುಡದಲ್ಲಿ 3ರಿಂದ 4ಕೆ,ಜಿ. ಫಸಲು ತೆಗೆದ ಸಾಧನೆ ಸುಬ್ಬಯ್ಯ ಅವರದ್ದು. ಒಂದು ವರ್ಷಕ್ಕೆ ಏಳು ಎಕರೆಯಲ್ಲಿ 35ಲಕ್ಷ ರೂ. ಆದಾಯ ಬಂದಿದ್ದು, 10 ಲಕ್ಷ ರೂ.ಗಳಷ್ಟು ಉತ್ಪಾದನಾ ವೆಚ್ಚವಾಗಿದೆ. 10ಲಕ್ಷ ರೂ.ಗಳ ಬುಡಗಳನ್ನು ಕಿತ್ತು ಮಾರಾಟ ಮಾಡಿದ್ದಾರೆ. ಒಂದು ತಂಡೆಯನ್ನು 110 ರೂ.ಗೆ ಮಾರಾಟವಾಗಿದೆ. ಏಲಕ್ಕಿ ಕೃಷಿಯಿಂದಲೇ 80 ಲಕ್ಷ ರೂ.ವೆಚ್ಚದಲ್ಲಿ ವಾಸದ ಮನೆ ನಿರ್ಮಿಸಿದ್ದು, 4 ಲಕ್ಷ ರೂ.ವೆಚ್ಚದಲ್ಲಿ ಡ್ರಯರ್ ಯಂತ್ರ ಸ್ಥಾಪಿಸಿದ್ದಾರೆ. ಇದರಿಂದ ಮಳೆಗಾಲದಲ್ಲೂ ಏಲಕ್ಕಿ ಒಣಗಿಸುತ್ತಾರೆ. ಬೇರೆ ಕೃಷಿಕರ ಏಲಕ್ಕಿ ಹಣ್ಣನ್ನು ಒಣಗಿಸಿ, ಪಾಲಿಶ್ ಮಾಡಿಕೊಡುತ್ತಾರೆ.
ತೋಟದೊಳಗೆ ಕೊಳವೆಬಾವಿ ನಿರ್ಮಿಸಿ, ಸೂಕ್ತ ಸಮಯದಲ್ಲಿ ನೀರು ಕೊಡುತ್ತಿದ್ದಾರೆ. ವೈಜ್ಞಾನಿಕವಾಗಿ ಪೈಪ್‌ಲೈನ್ ಅಳವಡಿಸಲಾಗಿದ್ದು, ಅವಶ್ಯಕ ಸಮಯದಲ್ಲಿ ಕೀಟನಾಶಕ, ಶಿಲೀಂದ್ರನಾಶಕ ಸಿಂಪಡಿಸುತ್ತಾರೆ. ಕಾರ್ಮಿಕರೊಂದಿಗೆ ಏಲಕ್ಕಿ ಹಣ್ಣು ಕುಯ್ಯುವ ಜವಾಬ್ದಾರಿಯನ್ನು ಪತ್ನಿ ವಹಿಸಿಕೊಂಡಿದ್ದಾರೆ. ಹತ್ತು ಕಾರ್ಮಿಕರು ಕೆಲಸ ಮಾಡಲಿದ್ದು, 40ಕೆ.ಜಿ.ಹಸಿ ಏಲಕ್ಕಿ ಕೊಯ್ಲು ಮಾಡುತ್ತಾರೆ. ಹೀಗೆ ದಂಪತಿ ಪ್ರತಿ ದಿನ ಏಲಕ್ಕಿ ತೋಟದಲ್ಲೇ ಕಾಲ ಕಳೆಯುತ್ತಾರೆ.
ಗುಬ್ಬಿ, ಚಾಮರಾಜನಗರ, ಹಾಸನ, ಕೊಣನೂರು, ಮಂಡ್ಯ ಇತರ ಕಡೆಗಳಿಂದ ಕೃಷಿಕರು ಇವರ ತೋಟದಿಂದ ಏಲಕ್ಕಿ ತಂಡೆಗಳನ್ನು ಖರೀದಿಸಿ ಹೋಗುತ್ತಾರೆ. ತೋಟಕ್ಕೆ ಬಂದವರಿಗೆ ಸೂಕ್ತ ಕೃಷಿ ಸಲಹೆಗಳನ್ನು ಸುಬ್ಬಯ್ಯ ಉಚಿತವಾಗಿ ನೀಡುತ್ತಿದ್ದಾರೆ.
ಏಲಕ್ಕಿ ಕೃಷಿಯೊಂದಿಗೆ ಕಾಫಿ, ಕಾಳುಮೆಣಸು, ಕಿತ್ತಳೆ, ಶುಂಠಿ, ಬಟರ್‌ಫ್ರೂಟ್, ಪಚ್ಚೆ ಬಾಳೆ ಕೃಷಿಯನ್ನೂ ಮಾಡಿದ್ದಾರೆ. ಒಂದೂವರೆ ಏಕರೆ ಜಾಗದಲ್ಲಿ ಒಂದೂವರೆ ಟನ್ ಕಾಳುಮೆಣಸು ತೆಗೆದ ಹೆಗ್ಗಳಿಕೆ ಇವರದ್ದು. ಏಲಕ್ಕಿಗೆ ಬೆಲೆ ಇಲ್ಲದ ಸಮಯದಲ್ಲಿ ಕಾಫಿ, ಕಾಳುಮೆಣ ಸಿನಿಂದ ಬಂದ ಆದಾಯವನ್ನು ಏಲಕ್ಕಿ ತೋಟ ನಿರ್ವಹಣೆಗೆ ಬಳಸುತ್ತಾರೆ.
ಸಕಲೇಶಪುರದಲ್ಲಿರುವ ಏಲಕ್ಕಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುತ್ತಾರೆ. ಕಳೆದ ನಾಲ್ಕೈದು ವರ್ಷಗಳಿಂದ 1 ಕೆ.ಜಿ. ಏಲಕ್ಕಿಗೆ ಒಂದೂವರೆ, ಎರಡು ಸಾವಿರದಷ್ಟು ಬೆಲೆ ಸಿಗುತ್ತಿದೆ. ಸರಾಸರಿ ಮೂರು ಸಾವಿರ ಸಿಕ್ಕರೆ ಒಂದಷ್ಟು ಲಾಭ ಪಡೆಯಬಹುದು ಎಂಬುದು ಸುಬ್ಬಯ್ಯ ಅವರ ಅನಿಸಿಕೆ.
ಕೊಡಗಿನಲ್ಲಿ ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ದುಪ್ಪಟ್ಟು ಕೂಲಿ, ಅನುಭವ ಕೊರತೆ, ರಾಸಾಯನಿಕ ಗೊಬ್ಬರ, ಕೀಟನಾಶಕ, ಶಿಲೀಂದ್ರ ನಾಶಕಗಳ ಬೆಲೆ ಗಗನಕ್ಕೇರಿದ್ದು, ಇತ್ತೀಚಿನ ವರ್ಷಗಳಲ್ಲಿ ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ರೋಗಬಾಧೆಯೂ ಇದೆ. ಬಹುತೇಕ ವರ್ಷಗಳಲ್ಲಿ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಆದರೂ ಏಲಕ್ಕಿ ನಮ್ಮ ಸಾಂಪ್ರಾದಾಯಿಕ ಬೆಳೆ. ಈ ಕೃಷಿಯನ್ನು ಉಳಿಸಲೇಬೇಕು. ಬೇರೆ ರೈತರಿಗೂ ಏಲಕ್ಕಿ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದೇನೆ. ಏಲಕ್ಕಿಗೆ ಸೂಕ್ತ ಬೆಲೆಯಿಲ್ಲದ ಕಾರಣ, ಕೃಷಿಕರು ಹಿಂದೇಟು ಹಾಕುತ್ತಿದ್ದಾರೆ. ಸುಧಾರಿತ ಕೃಷಿ ಮಾಡಿದರೆ ಲಾಭ ಪಡೆಯಬಹುದು.
ಎನ್.ಟಿ.ಸುಬ್ಬಯ್ಯ ಪ್ರಗತಿಪರ ಕೃಷಿಕ, ತಾಕೇರಿ ಗ್ರಾಮ.