ಪ್ರಕೃತ್ತಿ ವಿಕೋಪ ತಡೆ ಪೂರ್ವಭಾವಿ ಸಭೆ

03SPT2
Published on

ಸೋಮವಾರಪೇಟೆ: ಪ್ರಕೃತ್ತಿ ವಿಕೋಪ ತಡೆ ಪೂರ್ವಭಾವಿ ಸಭೆ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಮುದ್ದು ಮಹದೇವ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಪ್ರಕೃತ್ತಿ ವಿಕೋಪ ತುರ್ತು ಸಂದರ್ಭಗಳಲ್ಲಿ ಸಂಘ ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳ ಸ್ವಯಂ ಸೇವಕರು ಸೇರಿದಂತೆ ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸುವ ಮೂಲಕ ಅನಾಹುತಗಳನ್ನು ತಡೆಯಲು ಸಹಕರಿಸಬೇಕು ಎಂದು ಇನ್ಸ್‌ಪೆಕ್ಟರ್ ಮನವಿ ಮಾಡಿದರು. ಈಗಾಗಲೇ ಸಾಕಷ್ಟು ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಬಹುದು. ಈ ಹಿನ್ನೆಲೆಯಲ್ಲಿ ಮಳೆಯಿಂದ ಯಾವುದಾದರೂ ಅನಾಹುತಗಳು ನಡೆದಲ್ಲಿ, ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಅಪಾಯಕಾರಿ ಪ್ರದೇಶಗಳಲ್ಲಿ ಯಾವ ಮುಂಜಾಗ್ರತೆ ವಹಿಸಬೇಕೆಂದು ಮೇಲಧಿಕಾರಿಗಳ ಸೂಚನೆ ಅನ್ವಯ ಸಭೆ ನಡೆಸಲಾಗುತ್ತಿದೆ. ತಮ್ಮ ವ್ಯಾಪ್ತಿಯಲ್ಲಿ ಭೂ ಕುಸಿತ ಸಂಭವನೀಯ ಪ್ರದೇಶಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಸಭೆಗೆ ತಿಳಿಸಿದರು.

ಎಲ್ಲೆಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂಬ ಮಾಹಿತಿ ಪಡೆಯುತ್ತೇವೆ. ಮುಂದೆ ಹೆಚ್ಚಿನ ಮಳೆಯಾದರೆ ಸಮಸ್ಯೆಗಳು ಸೃಷ್ಟಿಯಾಗಬಹುದು. ಈ ನಿಟ್ಟಿನಲ್ಲಿ ಮುಂಜಾಗ್ರತೆ ಅಗತ್ಯವಾಗಿದೆ. ತಕ್ಷಣಕ್ಕೆ ಸ್ಪಂದಿಸಲು ಸ್ವಯಂಸೇವಕರ ತಂಡ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು. ಕಿಕ್ಕರಳ್ಳಿ, ಜೇಡಿಗುಂಡಿ, ಮಕ್ಕಳಗುಡಿ ಬೆಟ್ಟ, ಕುಂಬಾರಗಡಿಗೆ, ಮಾದಾಪುರ ಗ್ರಾಮಗಳು ಭೂ ಕುಸಿತ ಸಂಭವಿಸಬಹುದಾದ ಪ್ರದೇಶಗಳಾಗಿವೆ. 2018ರಲ್ಲಿ ನಡೆದ ಪ್ರಕೃತಿ ವಿಕೋಪ ಸಂದರ್ಭ ಸಾರ್ವಜನಿಕರೇ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಕೆಳಗಿನ ಪೆಟ್ರೋಲ್ ಬಂಕ್ ಹಿಂಭಾಗ ಮಣ್ಣು ತೆಗೆಯಲಾಗಿದ್ದು, ಕಟ್ಟಡಗಳು ಕುಸಿಯುವ ಭೀತಿ ಎದುರಾಗಿದೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ಸಧ್ಯಕ್ಕೆ ಅಪಾಯಕಾರಿ ಸ್ಥಳಕ್ಕೆ ಟಾರ್ಪಲ್ ಮುಚ್ಚಲು ನೋಟೀಸ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇನ್ಸ್‌ಪೆಕ್ಟರ್ ತಿಳಿಸಿದರು.

ಚಿಕ್ಕತೋಳೂರು ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಇದೆ. ರಾತ್ರಿ ಇಡೀ ಲಾರಿಗಳು ಸಂಚರಿಸುತ್ತಿವೆ. ಹರಪಳ್ಳಿಯಲ್ಲಿ ಮನೆ ಕುಸಿಯುವ ಭೀತಿ ಇದೆ. ದೊಡ್ಡಮನೆಕೊಪ್ಪದಲ್ಲಿ ಬೆಟ್ಟದ ಸಾಲುಗಳಲ್ಲಿ ಕಲ್ಲುಗಳು ಕುಸಿಯುತ್ತಿವೆ. ಮುಂಜಾಗ್ರತಾ ಕ್ರಮ ಅಗತ್ಯವಾಗಿದೆ ಎಂದು ಚಿಕ್ಕತೋಳೂರು ಗ್ರಾಮದ ಶೇಖರ್, ರುದ್ರಪ್ಪ ಸಭೆಯ ಗಮನಕ್ಕೆ ತಂದರು. ತಾಲೂಕು ಆಡಳಿತದೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದರು.

ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಇದೆ. ಅವರನ್ನು ಬಳಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಕೆಟಗರಿ ಮನೆಗಳ ಪಟ್ಟಿ ಇದೆ. ಅವರನ್ನು ತಕ್ಷಣ ಸ್ಥಳಾಂತರಿಸಿದರೆ ಮುಂದಿನ ಅನಾಹುತ ತಪ್ಪಿಸಬಹುದು ಎಂದು ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ತಿಮ್ಮಯ್ಯ ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಶಾಸಕರೊಂದಿಗೆ ವಿವಿಧ ಇಲಾಖಾಧಿಕಾರಿಗಳನ್ನು ಒಳಗೊಂಡಂತೆ ತಕ್ಷಣ ಸಭೆ ನಡೆಸಬೇಕೆಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net