

ಚಿತ್ರದುರ್ಗ: ಅಕ್ಕಮಹಾದೇವಿ ಅವರನ್ನು ಅಧ್ಯಯನ ಮಾಡುವುದು ಪ್ರಕೃತಿಯನ್ನು ಅಧ್ಯಯನ ಮಾಡಿದಂತೆ ಎಂದು ಮುರುಘಾ ಮಠದ ಆಡಳಿತ ಮಂಡ ಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರಕೃತಿಯೊಂದಿಗೆ ನಾವು ನಡೆದರೆ ನಮ್ಮ ಜೀವನ ಸುಗಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಕ್ಕ ಪ್ರಕೃತಿಯೊಂದಿಗೆ ಹೆಚ್ಚು ಮಾತನಾಡುತ್ತಿದ್ದರೆನ್ನುವುದು ಅವರ ವಚನಗಳಿಂದ ತಿಳಿಯುತ್ತದೆ. ಕಲ್ಯಾಣದಿಂದ ಕದಳೀವನದವರೆಗೆ ಅವರು ಪ್ರಾಣಿ-ಪಕ್ಷಿಗಳೊಂದಿಗೆ ಸಂವಹನ ನಡೆಸುತ್ತ ಪ್ರಯಾಣಿಸುತ್ತಾರೆ. ದ್ವೇಷ, ಮದ-ಮತ್ಸರಗಳನ್ನು ಗೆಲ್ಲುವುದು ಕಷ್ಟ. ಅಕ್ಕಮಹಾದೇವಿ ಇವೆಲ್ಲವನ್ನೂ ಗೆದ್ದಿದ್ದರು ಎಂದರು.
ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ ವೈರಾಗ್ಯನಿಧಿ, ಕನ್ನಡದ ಪ್ರಥಮ ಕವಯತ್ರಿ. ಅವರ ವಚನಗಳು ಮಹಿಳೆಯರಿಗೆ ಪ್ರೇರಣೆ ನೀಡುತ್ತವೆ ಎಂದರು.
ಅಕ್ಕಮಹಾದೇವಿಯವರ ಬಾಲ್ಯ, ಯೌವ್ವನ, ವೈವಾಹಿಕ ಜೀವನ, ಕಲ್ಯಾಣದ ಕಡೆಗಿನ ಪ್ರಯಾಣ, ಅಲ್ಲಮಪ್ರಭುಗಳಿಂದ ಪರೀಕ್ಷೆ, ಕಲ್ಯಾಣದಿಂದ ಚನ್ನಮಲ್ಲಿಕಾರ್ಜುನರನ್ನು ಅರಸುತ್ತ ಶ್ರೀಶೈಲದೆಡೆೆಗೆ ಸಾಗಿ ಕದಳೀವನದಲ್ಲಿ ಐಕ್ಯವಾದ ವೃತ್ತಾಂತವನ್ನು ಶ್ರೀಗಳು ವಿವರಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್ ಮಾತನಾಡಿ, ಶ್ರೀಮಠದಲ್ಲಿ ಬಸವಾದಿ ಶರಣರ ಜಯಂತಿಗಳನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವೈರಾಗ್ಯ ಜೀವನ ನಡೆಸಿದ ಅಕ್ಕಮಹಾದೇವಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಸಾದರಹಳ್ಳಿ ಸಿದ್ಧಲಿಂಗ ಶ್ರೀಗಳು, ಎನ್‌ಆರ್‌ಪುರ ಬಸವಕೇಂದ್ರದ ಪುಟ್ಟಸ್ವಾಮಿ, ಸಾಹಿತಿ ಆನಂದಕುಮಾರ್, ಜಾಗತಿಕ ಲಿಂಗಾಯತ ವೇದಿಕೆ ಸದಸ್ಯ ಬಸವರಾಜಕಟ್ಟಿ, ಜಿಲ್ಲಾ ಕದಳೀ ವೇದಿಕೆ ಅಧ್ಯಕ್ಷೆ ಪ್ರೊ.ಎಂ.ಆರ್. ಜಯಲಕ್ಷ್ಮೀ, ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್, ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಕೆ.ಬಿ. ಸಿದ್ಧೇಶ್, ಡಾ.ಕೆ.ಆರ್. ಕೃಷ್ಣಾರೆಡ್ಡಿ, ಡಾ.ಎಚ್.ಜೆ. ಲೋಕೇಶ್ ಮತ್ತಿತರರು ಇದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ಅಕ್ಕಮಹಾದೇವಿಯವರ ವಚನ ಪ್ರಾರ್ಥಿಸಿದರು. ಪ್ರೊ.ಆರ್.ಎಸ್. ಜಯದೇವಪ್ಪ ನಿರೂಪಿಸಿದರು.