ಪ್ರಕೃತಿಯೊಂದಿಗೆ ಕಿಲಾರಿಗಳ ಬದುಕು ಸಮರ್ಪಣೆ

Kilari
Published on

ಚಿತ್ರದುರ್ಗ: ಗುಡುಗು, ಸಿಡಿಲು, ಮಳೆ, ಗಾಳಿ ಸೇರಿ ಯಾವುದನ್ನು ಲೆಕ್ಕಿಸದೆ ಪ್ರಕೃತಿಯೊಂದಿಗೆ ಬದುಕನ್ನು ಸಮರ್ಪಿಸಿಕೊಳ್ಳುವ ಕಿಲಾರಿ ಸಮುದಾಯವನ್ನು ಒಳಗಣ್ಣಿನಿಂದ ನೋಡಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಂದ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಿಲಾರಿ ಕಲರವ ಉದ್ಘಾಟಿಸಿ ಮಾತನಾಡಿದರು.

ಮಣ್ಣಿನ ವಾಸನೆಯೊಂದಿಗೆ ಜೀವಿಸುವ ಕಿಲಾರಿಗಳಲ್ಲಿ ಸಮರ್ಪಣಾ ಮನೋಭಾವವಿದೆ. ನೆಲ, ಜಲ, ಸಮಾಜದ ಕುರಿತು ಕಾಳಜಿ ಹೊಂದಿದ್ದಾರೆ. ಆದರೆ, ಬೆಳ್ಳಿ, ಬಂಗಾರ ಸೇರಿ ಯಾವುದಕ್ಕೂ ಆಸೆ ಪಡುವವರಲ್ಲ ಎಂದರು.

ಬುದ್ಧ, ಬಸವ, ಅಂಬೇಡ್ಕರ್ ಸನ್ಮಾರ್ಗದಲ್ಲಿ ಸಾಗಲು ಮಾರ್ಗದರ್ಶಕರಾಗಿದ್ದಾರೆ. ಕಾವ್ಯ ಸೃಷ್ಟಿಸದಿದ್ದರೂ ಕಿಲಾರಿಗಳು ಕವಿಗಳಾಗಿದ್ದಾರೆ. ಯುದ್ಧ ಆಕ್ರಮ, ರಕ್ತವನ್ನು ಬಯಸುತ್ತದೆ. ಆದರೆ, ನಾವೆಲ್ಲರೂ ವಿಶ್ವ ಶಾಂತಿ ಬಯಸಬೇಕಿದೆ ಎಂದು ಸಲಹೆ ನೀಡಿದರು.

ಬಾಹ್ಯ ಸೌಂದರ್ಯಕ್ಕೆ ಆಕರ್ಷಿತರಾಗಿ ಮಾನವರು ಹಾಳಾಗಬಾರದು. ಸ್ತ್ರೀ-ಪುರುಷರಿಬ್ಬರನ್ನು ಸಮನಾಗಿ ಕಾಣಬೇಕು. ಮಾತು, ಮನಸ್ಸು, ನಡೆ, ನುಡಿ ಚೆನ್ನಾಗಿದ್ದಾಗ ಮಾತ್ರ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ಮೊಬೈಲ್ ಹಾವಳಿಯಿಂದಾಗಿ ಆತಂಕ ಕಾಡುತ್ತಿದೆ. ಪರಂಪರೆ, ಸಂಸ್ಕೃತಿ ಮರೆತಿದ್ದೇವೆ. ಬೂಟಾಟಿಕೆ, ಆಡಂಭರ, ಅಟ್ಟಹಾಸ ಆ ಜಾಗ ಆಕ್ರಮಿಸಿಕೊಳ್ಳುತ್ತಿದೆ. ಹೀಗಾಗಿ ಸಂಬಂಧಗಳು ನಶಿಸುತ್ತಿವೆ ಎಂದು ಬೇಸರಿಸಿದರು.

ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ನಿರ್ಲಕ್ಷಿತ ಸಮುದಾಯಗಳ ಜ್ಞಾನ,ಇತಿಹಾಸ ಶೋಧಿಸುವ ಸಂಶೋಧನೆಗಳ ಅಗತ್ಯವಿದೆ. ತತ್ವಪದಕಾರರಲ್ಲಿನ ನೆಲದ ಅರಿವು, ಪ್ರಜ್ಞೆ, ನಾಥ, ಸಿದ್ಧ, ಅವಧೂತ ಪರಂಪರೆ ಒಳಗೊಂಡಂತೆ ಕಿಲಾರಿಗಳ ಚರಿತ್ರೆಯನ್ನು ಶೈಕ್ಷಣಿಕ ಶಿಸ್ತಿನೊಳಗೆ ದಾಖಲಿಸುವ ಪ್ರಯತ್ನ ಆಗಬೇಕೆಂದು ಸಲಹೆ ನೀಡಿದರು.

ಬಯಲ ಬದುಕನ್ನು ಕಟ್ಟಿಕೊಂಡ ಬಡುಕಟ್ಟು ಸಮುದಾಯಗಳ ಚರಿತ್ರೆ ಮತ್ತು ಜ್ಞಾನವನ್ನು ಸಮಕಾಲೀನ ಸಂದರ್ಭಕ್ಕೆ ಮುಖಾಮುಖಿಗೊಳಿಸುವ ಅನಿವಾರ್ಯತೆಯಲ್ಲಿದ್ದೇವೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ, ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ವಿವಿಧ ವಿಭಾಗದ ಮುಖ್ಯಸ್ಥರಾದ ತಾರಿಣಿ ಶುಭದಾಯಿನಿ, ಪ್ರೊ.ಯಶೋಧಮ್ಮ, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net