ಪ್ರಕೃತಿಯನ್ನು ಪೂಜಿಸಿ ಮೌಲ್ಯ ಬೆಳೆಸಿ

SRI guna
ಶೃಂಗೇರಿಯಲ್ಲಿ ಆಯೋಜಿಸಿದ್ದ ಶಿವದೂತ ಗುಳಿಗ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಗುಣನಾಥ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಮುರಳೀಧರ ಪೈ, ತ್ರಿಮೂರ್ತಿ, ಹರೀಶ್, ಶಿವಾನಂದ ರಾವ್ ಇತರರಿದ್ದರು.
Published on

ಶೃಂಗೇರಿ: ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಮನುಷ್ಯನ ಅಸ್ತಿತ್ವದ ಅಡಿಪಾಯ ರೂಪಿಸುವ ಐದು ಮೂಲಭೂತ ಅಂಶಗಳಾಗಿವೆ. ಇವುಗಳನ್ನು ಪೂಜಿಸಿ, ಗೌರವಿಸಿ ಮುಂದಿನ ಪೀಳಿಗೆಗೆ ಉನ್ನತ ಮೌಲ್ಯಗಳನ್ನು ನಾವು ನೀಡಬೇಕಿದೆ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಶೃಂಗೇರಿ ಆದಿಚುಂಚನಗಿರಿ ಮಠದ ಬಿಜಿಎಸ್ ಅವರಣದಲ್ಲಿ ರಂಗ ಸಿಂಗಾರ ವೇದಿಕೆ ಸೋಮವಾರ ಆಯೋಜಿಸಿದ್ದ ಶಿವದೂತ ಗುಳಿಗ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವರನ್ನು ಪ್ರೀತಿಸಲು ನಂಬಿಕೆ ಮತ್ತು ಭಕ್ತಿಯ ಅಗತ್ಯವಿದೆ. ಆಧ್ಯಾತ್ಮಿಕ ಮೌಲ್ಯಗಳನ್ನು ಅನಾವರಣಗೊಳಿಸುವ ಧರ್ಮ ಗ್ರಂಥಗಳು, ಉಪನಿಷತ್ ಮತ್ತು ಧರ್ಮಬೋಧನೆಗಳ ಮೂಲಕ ದೈವಿಕ ತತ್ವಗಳನ್ನು ಅರಿಯಬೇಕು ಎಂದರು.

ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿ, ಶಿವದೂತ ಗುಳಿಗ ಕರಾವಳಿ ಪ್ರದೇಶದ ಪೂಜ್ಯ ದೇವರು. ಇದು ರಕ್ಷಣೆ, ನ್ಯಾಯ ಮತ್ತು ದೈವಿಕ ಅಧಿಕಾರ ಒಳಗೊಂಡಿದೆ. ಶಿವನ ಪರಿಚಾರಕನಾಗಿರುವ ಗುಳಿಗ ದುಷ್ಟತನ ನಿರ್ಮೂಲನೆ ಮಾಡುವ ಮತ್ತು ಧರ್ಮವನ್ನು ಎತ್ತಿಹಿಡಿಯುವ ಕಾರ್ಯ ಹೊಂದಿದೆ. ತುಳುನಾಡಿನ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಗುಳಿಗದ ಆರಾಧನೆ ಕರಾವಳಿಯ ಅವಿಭಾಜ್ಯ ಅಂಗವಾಗಿದೆ ಎಂದರು.

ರಂಗ ಸಿಂಗಾರ ವೇದಿಕೆ ಅಧ್ಯಕ್ಷ ಕಲ್ಕುಳಿ ಚಂದ್ರಶೇಖರ್ ಮಾತನಾಡಿ, ಸಮಾಜದಲ್ಲಿ ನಾವು ಸಮಾನತೆ ಮತ್ತು ನಂಬಿಕಸ್ಥರಾಗಿ ಹೇಗೆ ಬದುಕಬೇಕು ಎಂಬುದನ್ನು ನಾಟಕದ ಪಾತ್ರದಲ್ಲಿ ತಿಳಿಸಿದ್ದಾರೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ನಾಟಕ ನೋಡಲು ಆರು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ನಾಟಕದ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಲ್‌ಬೈಲು ಅವರನ್ನು ಸನ್ಮಾನಿಸಿದರು.

ಶಾಸಕ ಟಿ.ಡಿ.ರಾಜೇಗೌಡ, ರಂಗ ಸಿಂಗಾರ ಸಂಚಾಲಕ ಅನಿಲ್ ಹೊಸಕೊಪ್ಪ, ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಅಂಬಲಮನೆ, ಅವಿನಾಶ್, ಸಂತೋಷ್ ಕಾಳ್ಯ, ಜಗದೀಶ್ ಕಣದಮನೆ, ವಿ.ಎಸ್ ಅಶೋಕ್, ಉದಯ್ ಮೆಣಸೆ, ಆಶೀಶ್ ದೇವಾಡಿಗ, ಶೂನ್ಯ ರಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net