ಪ್ರಕೃತಿ ಸಮತೋಲನ ಕಾಪಾಡಿ

08 YERRISWAMY 02
Published on

ಬಳ್ಳಾರಿ : ಪ್ರತಿಯೊಬ್ಬರು ಪರಿಸರ ಬೆಳೆಸಿ, ಪ್ರಾಣಿಗಳನ್ನು ಉಳಿಸಿ, ಪ್ರಕೃತಿಯ ಸಮತೋಲನ ಕಾಪಾಡಬೇಕು ಎಂದು ಶ್ರೀ ವಾಸವಿ ವಿದ್ಯಾಲಯದ ಪ್ರಾಂಶುಪಾಲ ಯು. ವಿರೇಶ್ ಹೇಳಿದರು.
ನಗರದ ಶ್ರೀ ವಾಸವಿ ವಿದ್ಯಾಲಯದಲ್ಲಿ ವಿಜಯವಾಣಿ ನಂ.1 ಕನ್ನಡ ದಿನಪತ್ರಿಕೆ, ಅಲಾಪ್ ಸಂಗೀತ ಕಲಾ ಟ್ರಸ್ಟ್ ಹಾಗೂ ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ಶನಿವಾರ ನಡೆದ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ದಿನಾಚರಣೆ ಆಚರಿಸುವುದು ಇತ್ತೀಚಿನ ದಿನಗಳಲ್ಲಿ ಅತ್ಯಮೂಲ್ಯವಾಗಿದೆ. ವರ್ಷದ ಮೂರು ಕಾಲಗಳಲ್ಲಿ ಬೇಸಿಗೆ, ಚಳಿಗಾಲ ಹಾಗೂ ಮಳೆಗಾಲ ಬರುತ್ತದೆ. ಈ ವರ್ಷದ ಮೂರು ಕಾಲದಲ್ಲಿನ ಬೇಸಿಗೆ ಕಾಲದ ಬಿಸಿಲಿಗೆ ಬೆಂದಿದ್ದೇವೆ. ಇಂದಿಗೂ ದೆಹಲಿ ಹಾಗೂ ವಿವಿಧ ರಾಜ್ಯಗಳಲ್ಲಿ 53 ಡಿಗ್ರಿ ಸೆಲ್ಸಿಯಸ್ ತಾಪಮಾನ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿಯೊಂದು ಭೂಮಿಯ ಮೇಲಿರುವ ಪ್ರಾಣಿಗಳು ಪರಿಸರ ರಕ್ಷಣೆಗೆ ಕಾಳಜಿ ವಹಿಸಿವೆ. ಅವುಗಳಲ್ಲಿ ಕಾಳಜಿಯಲ್ಲಿ ಸ್ವಾರ್ಥ ಮತ್ತು ನಿಸಾರ್ಥತೆ ಕೂಡಿದೆ. ಪ್ರಾಣಿಗಳು ಪರಿಸರ ಕಾಪಾಡುವ ಉದ್ದೇಶ ಆಹಾರ, ಬೆಳಕು ಹಾಗೂ ಜೀವಿಸಲು. ಆದರೆ, ಮನುಷ್ಯರು ಅತಿಯಾದ ಆಸೆಯಿಂದ ಪರಿಸರ ವಿನಾಶಕ್ಕೆ ಕಾರಣವಾಗಿದ್ದಾರೆ. ಆದ್ದರಿಂದ, ಇಂದಿನಿಂದ ಪ್ರತಿಯೊಬ್ಬ ಮಕ್ಕಳು ತಮ್ಮ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡವನ್ನು ನೆಡಬೇಕು ಎಂದು ಕಿವಿ ಮಾತು ಹೇಳಿದರು. ಇಂತಹ ಪರಿಸರ ಉಳಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ವಿಜಯವಾಣಿ ಕನ್ನಡ ದಿನಪತ್ರಿಕೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಅಣ್ಣಾಜಿ ಕೃಷ್ಣರೆಡ್ಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಳಿಕ ಪರಿಸರ, ಪಟ್ಟಣ ಮತ್ತು ಪಾರ್ಕ, ನವ ಕನಸಿನ ಭೂಮಿಯ ವಿಷಯದ ಆಧಾರಿಸಿದ ಚಿತ್ರ ಬಿಡಿಸುವ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹತ್ತನೇ ತರಗತಿಯ ಹಜಿರ ಪ್ರಥಮ, ಐದನೇ ತರಗತಿಯ ವಿ.ಎನ್. ಸಾತ್ವಿಕ ದ್ವಿತೀಯ ಹಾಗೂ ಆರನೇ ತರಗತಿಯ ಅಜಯ ತೃತೀಯ ಸ್ಥಾನ ಪಡೆದರು. ಅವಿಗೆ ನಗದು ಬಹುಮಾನ ವಿತರಿಸಿ ಗೌರವಿಸಿ ಹಾಗೂ ಐವರ ವಿದ್ಯಾರ್ಥಿಗಳಿಗೆ ಸಮಾಧಾನಕಾರ ಬಹುಮಾನ ನೀಡಲಾಯಿತು.
ಜಬೀನ್ ಬೇಗಂ, ಇಂದು ಪ್ರಿಯ ತೀರ್ಪುಗಾರರಾಗಿದ್ದರು. ಶಿಕ್ಷಕಿರಾದ ಜೆ.ಎಸ್. ಬಸವರಾಜೇಶ್ವರಿ, ಸಂಗೀತ, ಶಬನಾಂ ಕೌಸರ್, ವ್ಯವಸ್ಥಾಪಕ ರಮೇಶ, ಸಿಬ್ಬಂದಿ ಗಣೇಶ, ಗೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net