ಪ್ರಕೃತಿ ವಿಕೋಪ ತಡೆಗೆ ಪೊಲೀಸರಿಂದ ಸಾರ್ವಜನಿಕ ಸಭೆ

04sunti02 (1)
Published on

ಸುಂಟಿಕೊಪ್ಪ: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಮುಖಂಡರೊಂದಿಗೆ ಶುಕ್ರವಾರ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಚಂದ್ರಶೇಖರ್, ಜಿಲ್ಲೆಯಲ್ಲಿ ಅತೀವ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ವರದಿಯನುಸಾರ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದ್ದು, ಭೂಮಿಯು ಸಡಿಲಗೊಳ್ಳುವುದರಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅಪತ್ತು ಸಂಭವಿಸುವ ಸ್ಥಳದ ತುರ್ತು ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ರವಾನಿಸುವ ಮೂಲಕ ತಮ್ಮಿಂದಾಗುವ ಅಮೂಲ್ಯ ಜೀವಗಳ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ತುರ್ತು ಸಂದರ್ಭದಲ್ಲಿ ಮರಗಳು ಧರೆಗೆ ಉರುಳಿದ ಸಂದರ್ಭ ಕೂಡಲೇ ಸಂಪರ್ಕಕ್ಕೆ ರಕ್ಷಣಾ ಕಾರ್ಯಕ್ಕೆ ಧಾವಿಸಲು ಜೆಸಿಬಿ, ಕ್ರೇನ್ ಮಾಲೀಕರು ಮತ್ತು ಆಪರೇಟರ್‌ಗಳು, ಆಂಬುಲೆನ್ಸ್, ಅವುಗಳ ಚಾಲಕರು ಮತ್ತು ಮಾಲೀಕರು ಮತ್ತು ಲಭ್ಯವಿರುವ ವುಡ್ ಕಟ್ಟರ್‌ಗಳು, ಸ್ವಯಂ ಸೇವಾ ಸಂಘಗಳು, ಮುಖಂಡರು ತಮ್ಮೊಂದಿಗೆ ಸಹಕಾರಕ್ಕೆ ಮುಂದಾಗಬೇಕೆಂದು ಮನವಿ ಮಾಡಿಕೊಂಡರು.

ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್‌ಕುಮಾರ್ ಮಾತನಾಡಿ, ಅಪಾಯದ ಅಂಚಿನಲ್ಲಿರುವ ಸ್ಥಳಗಳ ಮಾಹಿತಿ ನೀಡುವಂತೆ ಸೂಚಿಸಿದರಲ್ಲದೆ ತಾವುಗಳು ಸಲ್ಲಿಸಿದ ಮನವಿಯನ್ನು ಸರ್ಕಾರಕ್ಕೂ ಜಿಲ್ಲಾಡಳಿತಕ್ಕೆ ಕಳುಹಿಸುವ ಇದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲಾಗುವುದೆಂದು ಅವರು ಹೇಳಿದರು.

ಇದೇ ಸಂದರ್ಭ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ರಫೀಕ್‌ಖಾನ್, ಶಬ್ಬೀರ್, ಬಿ.ಕೆ.ಪ್ರಶಾಂತ್ ಅವರು ಮಾತನಾಡಿ, ಸುಂಟಿಕೊಪ್ಪ ಪಟ್ಟಣದ ಪಂಪ್ ಬಡಾವಣೆಯು ಅಪಾಯದ ಅಂಚಿನಲ್ಲಿದ್ದು, ಈ ಭಾಗದಲ್ಲಿ ನೂರಾರು ಕುಟುಂಬವು ವಾಸಿಸುತ್ತಿದ್ದಾರೆ. ಜತೆಗೆ ಇದೇ ಸ್ಥಳದಲ್ಲೇ ಅಂಗನವಾಡಿ ಕೇಂದ್ರ ಕಾರ್ಯಚರಿಸುತ್ತಿದೆ. ಮುಂದೆ ಅನಾಹುತ ಸಂಭವಿಸುವ ಮುನ್ನ ಇದಕ್ಕೆ ಸೂಕ್ತ ರೀತಿಯ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.

ಸಭೆಯ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಅಧ್ಯಕ್ಷ ಪಿ.ಆರ್.ಸುನಿಕುಮಾರ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಮಾತನಾಡಿದರು. ಸಭೆಯಲ್ಲಿ ಕಂದಾಯ ಇಲಾಖೆ ಗ್ರಾವ ಆಡಳಿತಾಧಿಕಾರಿ ಉಮೇಶ್, ಸೆಸ್ಕ್, ಶಿಕ್ಷಣ ಇಲಾಖೆ, ಪೊಲೀಸ್ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net