ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗಿ

Published on

ಯಾದಗಿರಿ: ಮಳೆಗಾಲ ಆರಂಭವಾಗಿದ್ದು, ನದಿ ತೀರದ ಪ್ರದೇಶ ಸೇರಿ ಮುಳುಗಡೆಯಾಗುವ ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ವಹಿಸುವ ಮೂಲಕ ಪ್ರಕೃತಿ ವಿಕೋಪ ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ವಿಪತ್ತು ನಿರ್ವಹಣೆ, ಬರ ಪರಿಹಾರ, ಕುಡಿಯುವ ನೀರು ಹಾಗೂ ಮುಂಗಾರು ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ ಮುನ್ನೆಚ್ಚರಿಕೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಪ್ರತಿನಿತ್ಯ ಮಳೆಯ ವರದಿ, ಪ್ರಕೃತಿ ವಿಕೋಪದಿಂದಾಗುವ ಮಾನವ, ಜಾನುವಾರು, ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಮತ್ತು ಮಳೆಗೆ ಬಿದ್ದಿರುವ ಮನೆಗಳ ವರದಿ ಸಲ್ಲಿಸಬೇಕು. ಪ್ರತಿ ಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಕಾರ್ಯದರ್ಶಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿದ್ದು ತೊಂದರೆಯಾಗುವ ಸಂಭವಿದ್ದಲ್ಲಿ ಆ ಕುರಿತು ಡಂಗೂರ ಸಾರಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು ಎಂದರ

ನದಿಗಳಲ್ಲಿ ನೀರು ಏರಿಬಂದಲ್ಲಿ ನದಿ ತೀರದ ಹಳ್ಳಿ ಜನರ ಸಂರಕ್ಷಣೆಗೆ ಬೋಟುಗಳ ಅವಶ್ಯಕತೆ ಬಗ್ಗೆ ಅಗ್ನಿ ಶಾಮಕ ಇಲಾಖೆ ಪರಿಶೀಲಿಸಿಕೊಳ್ಳಬೇಕು. ಹೋಮ್‌ಗಾರ್ಡ್ ಸಿಬ್ಬಂದಿ ಸಂಪರ್ಕದಲ್ಲಿಟ್ಟುಕೊಂಡು ಜನರ ಸಂರಕ್ಷಣೆಗೆ ಟೊಂಕಕಟ್ಟಿ ನಿಲ್ಲಬೇಕು. ಆರೋಗ್ಯ ಇಲಾಖೆ ಜನಸಾಮಾನ್ಯರಿಗೆ ಔಷಧಿ ದಾಸ್ತಾನು ಕುರಿತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಸಂಗ್ರಹವಿದೆಯೋ ಎನ್ನುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪ್ರವಾಹದಿಂದ ಹಾಗೂ ಜಲಾಶಯಗಳ ಹಿನ್ನೀರಿನಿಂದ ಮುಳುಗಡೆಯಾಗುವ ಪ್ರದೇಶಗಳನ್ನು ಗುರುತಿಸಿಕೊಂಡು, ಅಂತಹ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮುಂಚಿತವಾಗಿಯೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಕಾಳಜಿ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಮೂಲ ಸೌಕರ್ಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು.

ಸೇತುವೆಗಳ ಬದಿ, ನದಿ ದಂಡೆ ಮುಂತಾದವು ಶಿಥಿಲಾವಸ್ಥೆಯಲ್ಲಿರುವುದನ್ನು ಪತ್ತೆ ಹಚ್ಚಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ನದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಹಲಗೆ, ಗೇಟ್‌ಗಳನ್ನು ತೆರವುಗೊಳಿಸಬೇಕು. ಪ್ರವಾಹ ಎದುರಿಸಲು ಸೂಕ್ತ ಯೋಜನೆ ಸನ್ನದ್ಧವಾಗಿಟ್ಟುಕೊಂಡು ಅಧಿಕಾರಿಗಳು ಎಲ್ಲ ರೀತಿಯಲ್ಲಿ ಸಜ್ಜುಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಅಧಿಕಾರಿಗಳೊಂದಿಗೆ ಗೂಗಲ್ ಮೀಟ್ ಸಭೆ ಇದೇ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಜೈನ್ ಅವರು ಅಧಿಕಾರಿಗಳೊಂದಿಗೆ ಗೂಗಲ್ ಮೀಟಿಂಗ್ ಸಭೆ ನಡೆಸಿ, ಜಿಲ್ಲೆಯಲ್ಲಿ ರೈತರಿಗೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಬರ ಪರಿಹಾರವನ್ನು ಆದ್ಯತೆ ಮೇಲೆ ಸಂಬAಧಿಸಿದ ರೈತರಿಗೆ ವಿತರಿಸಬೇಕು. ವಿಶೇಷವಾಗಿ ಜಿಲ್ಲೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸುವ ಕುರಿತಂತೆ ಯೋಜನೆ ರೂಪಿಸಿ ರೈತರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ತಾಕೀತು ಮಾಡಿದರು.

ಜಿಪಂ ಸಿಇಒ ಗರೀಮಾ ಪನ್ವಾರ್, ಹೆಚ್ಚುವರಿ ಡಿಸಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಎಲ್ಲ ತಾಲೂಕು ತಹಸೀಲ್ದಾರರು ಮತ್ತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ವಿಪತ್ತು ನಿರ್ವಹಣೆ, ಹಾಗೂ ಮುಂಗಾರು ಪೂರ್ವ ಸಿದ್ಧತೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಮಾತನಾಡಿದರು. ಸಿಇಒ ಗರೀಮಾ ಪನ್ವಾರ್, ಹೆಚ್ಚುವರಿ ಡಿಸಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಪ್ರಕಾಶ ಕುದರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net