

ಕೆ.ಆರ್.ನಗರ : ಪ್ರಕೃತಿ ಚಿಕಿತ್ಸೆಯ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಜತೆಗೆ ಹಲವಾರು ಕಾಯಿಲೆಗಳಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಗದಗಿನ ಶ್ರೀ ವೀರೇಶ್ ಗುರೂಜಿ ಹೇಳಿದರು.
ಪಟ್ಟಣದ ವಾಸವಿ ಮಹಲ್‌ನಲ್ಲಿ ಪತಂಜಲಿ ಯೋಗಾಶ್ರಮ ಟ್ರಸ್ಟ್, ಆರ್ಯವೈಶ್ಯ ಮಂಡಳಿ ಮತ್ತು ಬಸವ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯೋಗ ನಿಸರ್ಗ ಚಿಕಿತ್ಸಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
15 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಮಣ್ಣಿನ ಕಟ್ಟು, ಎಣ್ಣೆ ಮಾಲಿಶ್, ಜಲಚಿಕಿತ್ಸೆ, ಉಪವಾಸ ಚಿಕಿತ್ಸೆ, ಬಸವ ಧ್ಯಾನ, ಬಸವ ಯೋಗ ಮೊದಲಾದ ಔಷಧ ರಹಿತ ಚಿಕಿತ್ಸೆ ನೀಡಲಾಗುವುದು. ಬಿಪಿ, ಶುಗರ್, ಅಸ್ತಮಾ, ಗ್ಯಾಸ್ಟ್ರಿಕ್, ಲಕ್ವಾ, ಥೈರಾಯ್ಡ, ಮೈಗ್ರೇನ್, ತಲೆನೋವು, ಸೊಂಟ ನೋವು ಸೇರಿದಂತೆ ಇತರ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವ ಮೂಲಕ ಅನಾರೋಗ್ಯದಿಂದ ಮುಕ್ತರಾಗಬಹುದು ಎಂದು ಸಲಹೆ ನೀಡಿದರು.
ಪತಂಜಲಿ ಯೋಗ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಯೋಗಿ ಮಾತನಾಡಿ, ಪ್ರತಿಯೊಬ್ಬರೂ ದಿನನಿತ್ಯ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ರಿಫೈನ್ಡ್ ಆಯಿಲ್ ಬದಲು ಗಾಣದ ಎಣ್ಣೆ, ಸಿರಿಧಾನ್ಯ, ಪಪ್ಪಾಯ ಹಣ್ಣು, ನಿಂಬೆಹಣ್ಣು, ಇವುಗಳನ್ನು ಬಳಸುವಂತೆ ತಿಳಿಸಿದರು.
ಪತಂಜಲಿ ಯೋಗ ಟ್ರಸ್ಟ್ ಅಧ್ಯಕ್ಷ ಪಿ.ಆರ್.ವಿಶ್ವನಾಥಶೆಟ್ಟಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಶಂಕರ್ ನಾರಾಯಣಶೆಟ್ಟಿ ಮಾತನಾಡಿದರು. ಪತಂಜಲಿ ಯೋಗ ಟ್ರಸ್ಟನ ಪ್ರಧಾನ ಕಾರ್ಯದರ್ಶಿ ಪ್ರಸಾದ್, ನಿರ್ದೇಶಕರಾದ ಕೆ.ವಿ.ಜಗದೀಶ್, ಎ.ಚೈತನ್ಯ, ಕೆ.ಎ.ರಮೇಶ್, ಕೃಷ್ಣಮೂರ್ತಿ, ಬಾಬು, ಕೆ.ವಿ.ಶ್ರೀಧರ್, ಮಹದೇವರಾವ್, ರೇವಣಸಿದ್ದೇಶ್ವರ, ಭಾರತ ವಿಕಾಸ್ ಪರಿಷತ್ ಅಧ್ಯಕ್ಷ ಯು.ಎ.ನಾಗರಾಜ್, ಶಿಬಿರಾರ್ಥಿಗಳು ಇದ್ದರು.