ಪ್ರಕುಲ್ ವುಡ್ ಫ್ಯಾಕ್ಟರಿ ಮೇಲೆ ದಾಳಿ:ಅರಣ್ಯಇಲಾಖೆಯಿಂದ ಪ್ರಕರಣ ದಾಖಲು

ಪ್ರಕುಲ್ ವುಡ್ ಫ್ಯಾಕ್ಟರಿ ಮೇಲೆ ದಾಳಿ:ಅರಣ್ಯಇಲಾಖೆಯಿಂದ ಪ್ರಕರಣ ದಾಖಲು
Published on

ಹಾಸನ : ನಗರದ ಬಿಎಂ ರಸ್ತೆಯಲ್ಲಿರುವ ಪ್ರಕುಲ್ ವುಡ್ ಫ್ಯಾಕ್ಟರಿ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಇಟ್ಟುಕೊಂಡಿದ ಎರಡು ಮಷಿನ್‌ಗಳನ್ನು ವಶಕ್ಕೆ ಪಡೆದು ಕಾರ್ಖಾನೆಗೆ ಬೀಗ ಹಾಕಿದ್ದಾರೆ. ಜೊತೆಗೆ ಉದ್ಯೋಗಿ ಲೋಕೇಶ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪರವಾನಗಿ ಇಲ್ಲದೆ ಹೆಚ್ಚುವರಿ ಮಷಿನ್ ಅಳವಡಿಸಲಾಗಿದೆ ಎಂಬ ಆರೋಪದ ಹಿನ್ನಲೆ ಅರಣ್ಯ ಅಧಿಕಾರಿಗಳು ಬಿಎಂ ರಸ್ತೆಯಲ್ಲಿರುವ ಪ್ರಕುಲ್ ವುಡ್ ಫ್ಯಾಕ್ಟರಿ ಮೇಲೆ ಕಳೆದ ಗುರುವಾರ ದಾಳಿ ನಡೆಸಿದ್ದರು. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ಅಧಿಕ ಮಷಿನ್ ಅಳವಡಿಸಲಾಗಿತ್ತು. ಹಾಸನ ಮತ್ತು ಬೆಂಗಳೂರಿನಿಂದ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹೆಜೆಂಟಲ್ ಹಾಗು ವರ್ಟಿಕಲ್ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಿರುವುದು ತಿಳಿದಿದೆ. ಈ ಸಂಬಂಧ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ವರದಿ ಸಹ ಸಲ್ಲಿಸಲಾಗಿದೆ.
ಈ ಸಂಬಂಧ ಅರಣ್ಯ ಇಲಾಖೆಯ ಉಪಸಂರಕ್ಷಣೆ ಅಧಿಕಾರಿ ಸೌರಭ್ ಕುಮಾರ್ ವಿಜಯವಾಣಿಯೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 160 ಸಾಮಿಲ್‌ಗಳಿದ್ದು, ಈ ತಿಂಗಳಲ್ಲಿ ಒಟ್ಟು ಮೂರು ಸಾಮಿಲ್‌ಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಭಾರತೀ ಸಾಮಿಲ್, ರಂಗನಾಥ ಸಾಮಿಲ್ ಮತ್ತು ಪ್ರಕುಲ್ ವುಡ್ ಫ್ಯಾಕ್ಟರಿ ದಾಳಿ ಮಾಡಲಾಗಿದೆ ಎಂದು ಹೇಳಿದರು.
ದೂರಗಳನ್ನು ಆಧರಿಸಿ ದಾಳಿ ಮಾಡಲಾಗುತ್ತದೆ. ಇನ್ನು ಕೆಲ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ ಸಾಮಿಲ್‌ಗಳಲ್ಲಿ ಅಕ್ರಮವಾಗಿ ಹೆಚ್ಚು ಮರಗಳನ್ನು ಸಂಗ್ರಹ ಮಾಡಿದ್ದರೆ ಮತ್ತು ಅನುಮತಿ ಇಲ್ಲದೆ ಹೆಚ್ಚುವರಿ ಯಂತ್ರಗಳನ್ನ ಅಳವಡಿಸಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net