ಪ್ರಕಾಶ ಮಾಶೆಟ್ಟೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ

Prakash mashetty
Published on

ಭಾಲ್ಕಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಮುಖಂಡ ಪ್ರಕಾಶ ಮಾಶೆಟ್ಟೆ ಅವರನ್ನು ನೇಮಕ ಮಾಡಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರು ಈ ಕುರಿತು ಭಾನುವಾರ ಆದೇಶ ಹೊರಡಿಸಿದ್ದು, ತಕ್ಷಣ ಅಧಿಕಾರ ವಹಿಸಿಕೊಂಡು ಜಿಲ್ಲಾ ಸಮಿತಿ ಮಾರ್ಗದರ್ಶನ ಹಾಗೂ ಸ್ಥಳೀಯ ಮುಖಂಡರ ಸಹಯೋಗದಲ್ಲಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗುವಂತೆ ಸೂಚಿಸಿದ್ದಾರೆ. ಜಿಲ್ಲಾ ಸಮಿತಿಯಲ್ಲಿ ಹೊಣೆ ವಹಿಸಿದ ಹಿನ್ನೆಲೆಯಲ್ಲಿ ಮಾಶೆಟ್ಟೆ ಅವರು ಇಲ್ಲಿ ಖಂಡ್ರೆ ಅವರಿಗೆ ಭೇಟಿ ಮಾಡಿ ಗೌರವಿಸಿದರು.

ಪಟ್ಟಣದ ನಿವಾಸಿಯಾದ ಪ್ರಕಾಶ ಮಾಶೆಟ್ಟೆ ಅವರು ಬಿಎಸ್ಸಿ, ಬಿಇಡಿ ಪದವೀಧರರು. ಕೆಲವು ವರ್ಷ ಸಂತಪುರ ಸುಭಾಷಚಂದ್ರ ಭೋಸ್ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಉದ್ಯಮದಲ್ಲಿ ತೊಡಗುವ ಜತೆಯಲ್ಲೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದರು. ಎರಡು ದಶಕ ಬಿಜೆಪಿಯಲ್ಲಿದ್ದರು. ಭಾಲ್ಕಿ ಬಿಜೆಪಿ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ಸಮರ್ಥ ನಿಭಾಯಿಸಿದ್ದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರಿದ ವೇಳೆ ಮಾಶೆಟ್ಟೆ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಈಶ್ವರ ಖಂಡ್ರೆ ಗೆಲುವಿಗೆ ಶ್ರಮಿಸಿದರು. ಇದೀಗ ಈಶ್ವರ ಖಂಡ್ರೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಶೆಟ್ಟೆಗೆ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net