ಪ್ರಕರಣವಿಲ್ಲದಿದ್ದರೂ ರಾಣೆಬೆನ್ನೂರ ಪಾಸಿಟಿವ್!

5-RNR-01
Published on

ರಾಣೆಬೆನ್ನೂರ: ಕೋವಿಡ್-19 ಕರೊನಾಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಜಾಗೃತಿಗಾಗಿ ಆರೋಗ್ಯ ಸೇತು ಆಪ್ ರೂಪಿಸಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ಆಪ್ ಡೌನ್​ಲೋಡ್ ಮಾಡಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ರಾಣೆಬೆನ್ನೂರಿನಲ್ಲಿ ಈ ಆಪ್ ಡೌನ್​ಲೋಡ್ ಮಾಡಿಕೊಂಡವರ ಎದೆಯಲ್ಲಿ ಢವ ಢವ ಶುರುವಾಗಿದೆ.

ಕಳೆದ ಮೂರು ದಿನದಿಂದ ಆರೋಗ್ಯ ಸೇತು ಆಪ್​ನಲ್ಲಿ ರಾಣೆಬೆನ್ನೂರ ನಗರದಲ್ಲಿ ಕೋವಿಡ್-19 ಪ್ರಕರಣ ಕುರಿತು ಸರ್ಚ್ ಮಾಡಿದರೆ ಐದು ಕಿ.ಮೀ. ಒಳಗಡೆ ಕೋವಿಡ್-19 ಒಂದು ಪ್ರಕರಣ ಪಾಸಿಟಿವ್ ಎಂದು ತೋರಿಸುತ್ತಿದೆ. ಇದರಿಂದಾಗಿ ಜನ ಭಯಭೀತರಾಗಿದ್ದು, ರೋಗಿ ಯಾರಿರಬಹುದು, ಎಲ್ಲಿರಬಹುದು ಎಂಬ ಚಿಂತೆಯಲ್ಲಿದ್ದಾರೆ.

ಆದರೆ, ರಾಣೆಬೆನ್ನೂರಿನಲ್ಲಿ ಯಾವುದೇ ಕೋವಿಡ್-19 ಪ್ರಕರಣ ದೃಢಗೊಂಡಿದ್ದು ಇಲ್ಲ. ಆಪ್​ನಲ್ಲಿ ಆಗಿರುವ ಸಣ್ಣ ತಾಂತ್ರಿಕ ಸಮಸ್ಯೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ತಜ್ಞರ ತಂಡವು ಇದುವರೆಗೂ ಸರಿಪಡಿಸಿಲ್ಲ. ಹೀಗಾಗಿ, ಇಂದಿಗೂ ಆಪ್​ನಲ್ಲಿ ರಾಣೆಬೆನ್ನೂರಿನಲ್ಲಿ ಕೋವಿಡ್-19ಗೆ ಸಂಬಂಧಿಸಿ 1 ಪ್ರಕರಣ ಪಾಸಿಟಿವ್ ಎಂದು ತೋರಿಸುತ್ತಿದೆ.

ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ ಇದೀಗ ಸವಣೂರಿನಲ್ಲಿ ಒಂದು ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಶುರುವಾಗಿದೆ. ಕರೊನಾ ಸೋಂಕು ಹರಡುವ ಭಯದಿಂದಾಗಿ ಜನ ತಮ್ಮ ಸುತ್ತಮುತ್ತಲಿನ ಜನರ ಆರೋಗ್ಯ ತಿಳಿಯಲು ಆರೋಗ್ಯ ಸೇತು ಆಪ್ ಮೊರೆ ಹೋಗಿದ್ದಾರೆ.

ಆದರೆ, ಆಪ್​ನಿಂದ ತಪ್ಪು ಮಾಹಿತಿ ರವಾನೆಯಾಗುತ್ತಿರುವುದನ್ನು ನೋಡಿದರೆ, ಅಧಿಕಾರಿಗಳು ಕಾರ್ಯ ಮರೆತಂತೆ ಕಾಣುತ್ತಿದೆ. ಆಪ್ ನಿರ್ವಹಣೆಯಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿದ ಆರೋಪ ಕೇಳಿಬರತೊಡಗಿದೆ.

ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಆಪ್​ನಲ್ಲಿ ಆಗಿರುವ ಲೋಪದೋಷ ಸರಿಪಡಿಸಬೇಕು ಎಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.

ಏನೀದು ಆರೋಗ್ಯ ಸೇತು?

ಕೋವಿಡ್-19 ವಿರುದ್ಧ ಹೋರಾಡಲು ಭಾರತದ ಜನರೊಂದಿಗೆ ಆರೋಗ್ಯ ಸೇವೆಗಳನ್ನು ಸಂರ್ಪಸಲು ಹಾಗೂ ಕೋವಿಡ್-19 ಸೋಂಕಿತರ ಬಗ್ಗೆ ಅಲರ್ಟ್ ಮಾಡಲು ಕೇಂದ್ರ ಸರ್ಕಾರ ರೂಪಿಸಿದ ಮೊಬೈಲ್ ಅಪ್ಲಿಕೇಶನ್. ಈ ಆಪ್ ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಂಡು ಬಳಕೆ ಮಾಡಬೇಕು. ಕೋವಿಡ್-19 ಸೋಂಕಿತರ ಬಗ್ಗೆ ಅಲರ್ಟ್ ಮಾಡುತ್ತದೆ. ರೋಗಿ ಎಷ್ಟು ದೂರ ಇದ್ದಾರೆ ಎಂಬುದನ್ನು ತಿಳಿಸುತ್ತದೆ. ಸಮೀಪ ಬಂದರೆ ಅಲರ್ಟ್ ಮಾಡುತ್ತದೆ. ಕೋವಿಡ್-19 ಅನ್ನು ಒಳಗೊಂಡಿರುವ ಅಪಾಯ, ಸಂಬಂಧಿತ ಸಲಹೆ, ಸೋಂಕು ಹರಡುವ ಬಗ್ಗೆ, ಅನುಸರಿಸಬೇಕಾದ ಮುಂಜಾಗ್ರತೆ ಕ್ರಮ, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿ ಹಲವು ಮಾಹಿತಿ ಲಭ್ಯವಿದೆ. ಸ್ವಯಂ ಮೌಲ್ಯಮಾಪನ ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಮೊಬೈಲ್ ಪರದೆಯ ಮೇಲೆ ಮೂಡಲಿವೆೆ. ಅದಕ್ಕೆ ಉತ್ತರಿಸಿದ ಬಳಿಕ ಫಲಿತಾಂಶ ನೀಡಲಾಗುತ್ತದೆ. ಈ ಆಪ್ ಅನ್ನು ಸಾರ್ವಜನಿಕರು, ಸರ್ಕಾರಿ ನೌಕರರು, ಸ್ವಯಂ ಸೇವಕರು ಎಲ್ಲರೂ ಡೌನ್​ಲೋಡ್ ಮಾಡಿಕೊಂಡು ಬಳಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಮನವಿ ಮಾಡಿದ್ದಾರೆ.

ರಾಣೆಬೆನ್ನೂರ ನಗರ ಹಾಗೂ ತಾಲೂಕಿನಲ್ಲಿ ಯಾವುದೇ ಕೋವಿಡ್-19 ಪ್ರಕರಣ ಪಾಸಿಟಿವ್ ಇಲ್ಲ. ಆರೋಗ್ಯ ಸೇತು ಆಪ್​ನಲ್ಲಿ ತಾಂತ್ರಿಕ ದೋಷದಿಂದ 5 ಕಿ.ಮೀ. ಒಳಗಡೆ 1 ಪಾಸಿಟಿವ್ ಎಂದು ತೋರಿಸುತ್ತಿದೆ. ಇದು ಮೂರು ದಿನದಿಂದ ಆಗಿದೆ. ಈ ತಾಂತ್ರಿಕ ದೋಷವನ್ನು ಸರಿಪಡಿಸಲು ಜಿಲ್ಲಾಮಟ್ಟದ ತಾಂತ್ರಿಕ ತಜ್ಞರ ಗಮನಕ್ಕೆ ತಂದಿದ್ದೇವೆ. ಹೀಗಾಗಿ ಯಾರೂ ಭಯಪಡುವ ಆತಂಕವಿಲ್ಲ. | ಡಾ. ಸಂತೋಷಕುಮಾರ, ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net