ಪ್ರಕರಣಗಳ ಶೀಘ್ರ ವಿಲೇವಾರಿಗೆ ಲೋಕಾ ಅದಾಲತ್ ಸಹಕಾರಿ:ನ್ಯಾ. ಉಷಾರಾಣಿ

ಪ್ರಕರಣಗಳ ಶೀಘ್ರ ವಿಲೇವಾರಿಗೆ ಲೋಕಾ ಅದಾಲತ್ ಸಹಕಾರಿ:ನ್ಯಾ. ಉಷಾರಾಣಿ
Published on

 ಹಾಸನ: ಕೋರ್ಟಿನಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ಇದರ ಹೊರೆ ಇಳಿಸಿ ಶೀಘ್ರವಾಗಿ ನ್ಯಾಯವನ್ನು ಕೊಡುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಕೆಳಗೆ ಲೋಕಾ ಅದಾಲತ್ ಹೆಚ್ಚು ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವಣದಲ್ಲಿರುವ ಎಡಿಆರ್ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರ್ಕಾರಿ ಕಾನೂನು ಕಾಲೇಜು, ಎಂ. ಕೃಷ್ಣ ಕಾನೂನು ಕಾಲೇಜು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ಯಾನಲ್ ವಕೀಲರು, ಕಾನೂನು ಸ್ವಯಂ ಸೇವಕರು ಮತ್ತು ಕಾನೂನು ನೆರವು ಅಭಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಸಲಹೆ ನೀಡಲು ನಮ್ಮ ನ್ಯಾಯಾಲಯದ ಬಳಿ ಇಬ್ಬರು ವಕೀಲರು ಯಾವಾಗಲು ಇರುತ್ತಾರೆ. ಯಾರಿಗಾದರೂ ಕಾನೂನು ಬಗ್ಗೆ ಮಾಹಿತಿ ಬೇಕಾದರೆ ಇವರು ಸಹಾಯ ಮಾಡುತ್ತಾರೆ. ಕ್ರಿಮಿನಲ್ ಪ್ರಕರಣದಲ್ಲಿ ಕೇಸನ್ನು ಮಂಡಿಸಿ ಅವರ ಪರವಾಗಿ ಪ್ರಕರಣ ನಡೆಸುತ್ತಾರೆ ಎಂದು ತಿಳಿಸಿದರು.

ತ್ವರಿತವಾಗಿ ನ್ಯಾಯವನ್ನು ಕೊಡುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಕೆಳಗೆ ಲೋಕಾ ಅದಾಲತ್ ಕೂಡ ಮಾಡಲಾಗುತ್ತದೆ. ನ್ಯಾಯಾಲಯದಲ್ಲಿ ಹೆಚ್ಚು ಕೇಸುಗಳು ನಡೆಯುತ್ತಿದ್ದು, ಬಹಳ ಹೊರೆ ಇರುವುದರಿಂದ ಇದನ್ನು ಕಡಿಮೆ ಮಾಡಲು ಈ ಲೋಕಾ ಅದಾಲತ್ ಸಹಾಯಕ ಆಗುತ್ತಿದೆ. ಈ ವಿಚಾರವನ್ನೆಲ್ಲ ಜನರಿಗೆ ತಿಳಿಸುವ ಉದ್ದೇಶದಲ್ಲಿ ಎಲ್ಲರ ಸಹಾಯ ಬೇಕಾಗುತ್ತದೆ. ಸರ್ಕಾರದಲ್ಲಿ ಹಲವಾರು ಯೋಜನೆಗಳಿದ್ದರೂ ಬಹಳಷ್ಟು ಜನರಿಗೆ ಅವುಗಳ ಬಗ್ಗೆ ಗೊತ್ತಿರುವುದಿಲ್ಲ. ಇಂತಹ ಕಾರ್ಯಾಗಾರದ ಮೂಲಕ ಹಲವಾರು ವಿಚಾರವನ್ನು ತಿಳಿದುಕೊಳ್ಳಲು ಸಹಕಾರಿ ಆಗಲಿದೆ. ಪ್ರತಿ ಹಂತದಲ್ಲೂ ಎಲ್ಲರೂ ಅನೇಕ ವಿಚಾರಗಳನ್ನು ತಿಳಿದುಕೊಂಡಿರಬೇಕು. ದಿನೇದಿನೆ ಕಾನೂನಿನಲ್ಲಿ ಮತ್ತು ಸರ್ಕಾರದ ಯೋಜನೆಗಳು ಬದಲಾಗುತ್ತಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ರೂಪಾ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ, ಎಂ. ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ವಿ. ಶ್ರೀನಿವಾಸ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ. ಚಂದ್ರಶೇಖರ್, ವಕೀಲರಾದ ಮನುಕುಮಾರ್, ಜೀವನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net