ಪ್ಯಾಸ್ ಫೌಂಡೇಷನ್ ನಿಸ್ವಾರ್ಥ ಸೇವೆ ಶ್ಲಾಘನೀಯ - ಲಕ್ಷ್ಮೀ ಹೆಬ್ಬಾಳ್ಕರ್

010101
Published on

ಬೆಳಗಾವಿ: ಪ್ಯಾಸ್ ಫೌಂಡೇಷನ್ 8-9 ವರ್ಷಗಳಿಂದ ನೀರಿನ ಮಹತ್ವ ತಿಳಿಸಿಕೊಡುವ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಈ ಕಾರ್ಯ ದೇವರ ಕೆಲಸಕ್ಕೆ ಸಮಾನವಾದದ್ದು. ಸ್ವಾರ್ಥರಹಿತವಾಗಿ ಪ್ಯಾಸ್ ಫೌಂಡೇಷನ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಜಪತಿಯಲ್ಲಿ ಬುಧವಾರ ಪ್ಯಾಸ್ ಫೌಂಡೇಷನ್ ಅಭಿವೃದ್ಧಿಪಡಿಸಿದ ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಮಾತನಾಡಿದರು. ರಾಜಕಾರಣಿಗಳು ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಆದರೆ, ನಿಸ್ವಾರ್ಥವಾಗಿ ಕೆಲಸ ಮಾಡುವುದು ದೇವರ ಕೆಲಸಮಾಡಿದಂತೆ. ಪ್ಯಾಸ್ ಫೌಂಡೇಷನ್ ಕೆಲಸ ಇನ್ನಷ್ಟು ದೊಡ್ಡದಾಗಿ ಮುಂದುವರಿಯಲಿ ಎಂದರು.

ಈ ಭಾಗದಲ್ಲಿ ಮೊದಲು ಕೆರೆ ತುಂಬುವ ಯೋಜನೆಯ ಪರಿಕಲ್ಪನೆಯೇ ಇರಲಿಲ್ಲ. ಕೆರೆ ತುಂಬುವ ಯೋಜನೆ ಎಂದರೆ ಎನೆಂದು ಈ ಭಾಗದ ಜನರಿಗೆ ಗೊತ್ತಿರಲಿಲ್ಲ. ಕೇವಲ ದಕ್ಷಿಣ ಕರ್ನಾಟಕ ಭಾಗದವರು ಯೋಜನೆ ತೆಗೆದುಕೊಂಡು ಹೋಗುತ್ತಿದ್ದರು. ನಾನು ಶಾಸಕಿಯಾದ ತಕ್ಷಣ ಕೆರೆ ತುಂಬುವ ಯೋಜನೆ ಕೈಗೆತ್ತಿಕೊಂಡಿದ್ದೇನೆ. ನಮ್ಮ ಗ್ರಾಮೀಣ ಕ್ಷೇತ್ರಕ್ಕೆ ಕೆರೆ ತುಂಬುವ ಯೋಜನೆಗೆ ಸುಮಾರು 900 ಕೋಟಿ ರೂ. ಅನುದಾನ ತಂದಿದ್ದೇನೆ ಎಂದರು.

ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಜಲಮೂಲಗಳನ್ನು ರಕ್ಷಿಸುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು. ಜಿನಾಬಕುಲ್ ಫೋರ್ಜ್ ಪ್ರೈವೇಟ್ ಲಿಮಿಟೆಡ್‌ನ ಆರ್ಥಿಕ ಸಹಕಾರದೊಂದಿಗೆ ಪ್ಯಾಸ್ ಫೌಂಡೇಷನ್ ವತಿಯಿಂದ ಪುನರುಜ್ಜೀವನಗೊಳಿಸಿದ ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.

ಜಿಪಂ ಸಿಇಒ ರಾಹುಲ್ ಶಿಂಧೆ, ಪ್ಯಾಸ್ ಫೌಂಡೇಷನ್ ಅಧ್ಯಕ್ಷ ಡಾ.ಮಾಧವ ಪ್ರಭು, ಉಪಾಧ್ಯಕ್ಷ ಅಭಿಮನ್ಯು ಡಾಗಾ, ಕಾರ್ಯದರ್ಶಿ ಡಾ.ಪ್ರೀತಿ ಕೋರೆ, ಸದಸ್ಯರಾದ ಸೂರ್ಯಕಾಂತ ಹಿಂಡಾಲ್ಗೆಕರ, ಅವಧೂತ ಸಾಮಂತ, ದೀಪಕ ಓವುಳಕರ, ಸತೀಶ್ ಲಾಡ್, ರೋಹನ ಕುಲಕರ್ಣಿ, ಲಕ್ಷ್ಮೀಕಾಂತ ಪಸಾರೆ, ರಮೇಶ ಪಾಟೀಲ, ಬಾಳು ಬದನ, ಕಿರಣ ಜಿನಗೌಡ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಗ್ರಾಪಂ ಅಧ್ಯಕ್ಷೆ ಶೋಭಾ ಕುರುಬರ, ಉಪಾಧ್ಯಕ್ಷ ಸುನಿಲ್ ದಳವಾಯಿ, ಸದಸ್ಯರಾದ ಸಂತೋಷ ಬಂದವ್ವಗೋಳ, ಭೀಮಪ್ಪ ಪೂಜೇರ, ಮಲ್ಲವ್ವ ಕೋಲಕಾರ, ಮಹಾದೇವಿ ಕೋಲಕಾರ, ಇನಾಯತಅಲಿ ಅತ್ತಾರ, ಮೌಲಾಅಲಿ ಯಕ್ಕುಂಡಿ, ಅಶ್ವಿನಿ ಕೆಮಜಿ, ಗಂಗಪ್ಪ ಮುನವಳ್ಳಿ, ಹನಮಂತ ಶೀಗಿಹಳ್ಳಿ, ರಾಜು ಅಲಹಾಬಾದಿ, ಬಸವರಾಜ ಕಲಾರಕೊಪ್ಪ, ಶಿವಾಜಿ ಕೆಮಜಿ ಹಾಗೂ ಗ್ರಾಮದ ಹಿರಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net