ಪ್ಯಾರಾಥೈರಾಯ್ಡ್ ಗಡ್ಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

bkt-7-3
ಹೊರ ತೆಗೆದ ಪ್ಯಾರಾಥೈರಾಯ್ಡ್ ಗೆಡೆ.
Published on

ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಎಂಡೋಕ್ರನಾಲಜಿ ವಿಭಾಗದ ಮಧುಮೇಹ ತಜ್ಞ ಡಾ.ನವೀನ ವಿ.ಚರಂತಿಮಠ ಮತ್ತು ಕ್ಯಾನ್ಸರ್ ತಜ್ಞ ಡಾ.ಬಸವರಾಜ ಅಂಕಲಕೋಟಿ ಅವರು ಅತ್ಯಂತ ವಿರಳವಾದ ಮತ್ತು ಪ್ರಾಣಾಪಾಯಕ್ಕೆ ಕಾರಣವಾಗುವ ಪ್ಯಾರಾಥೈರಾಯ್ಡ್ ಗೆಡ್ಡೆಯಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಮಧುಮೇಹ ತಜ್ಞ ಡಾ.ನವೀನ ವಿ.ಚರಂತಿಮಠ, ಈ ಪ್ಯಾರಾಥೈರಾಯ್ಡ್ ಗಡ್ಡೆ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಬಾಗಲಕೋಟೆಯ ೪೨ ವರ್ಷ ವಯಸ್ಸಿನ ವ್ಯಕ್ತಿ ಕೀಲು ನೋವು ಮತ್ತು ಆಯಾಸದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವಿವಿಧ ಪ್ರಯೋಗಾಲಯದ ತಪಾಸಣೆಗೆ ಒಳಪಡಿಸಿದಾಗ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣವು ಹೆಚ್ಚಿದ ಲಕ್ಷಣಗಳು ಕಂಡುಬಂದವು. ವಿವರವಾದ ತಪಾಸಣೆಯ ನಂತರ ಕುತ್ತಿಗೆಯಲ್ಲಿರುವ ಪ್ಯಾರಾಥೈರಾಯ್ಡ್ ಅತಿಯಾದ ಹಾರ್ಮೋನ್ ಸ್ರವಿಸುತ್ತಿರುವುದು ತಿಳಿದುಬಂತು. ಪ್ಯಾರಾಥೈರಾಯ್ಡ್ ಹಾರ್ಮೋನ್ ಅತಿಯಾಗಿ ಸ್ರವಿಸುವುದರಿಂದ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣದಲ್ಲಿ ಅಸಹಜವಾದ ಏರಿಕೆ ಉಂಟಾಗುತ್ತದೆ. ಪರಿಣಾಮವಾಗಿ ರೋಗಿಯಲ್ಲಿ ಖಿನ್ನತೆ, ನಿದ್ರಾಹೀನತೆ, ಜ್ಞಾಪಕಶಕ್ತಿಯ ಕೊರತೆಯಂಥ ಸಮಸ್ಯೆಗಳು ಕಂಡು ಬರುತ್ತವೆ. ಅತಿಯಾದ ಕ್ಯಾಲ್ಸಿಯಮ್‌ನಿಂದ ಮೂಳೆನೋವು ಮತ್ತು ಮೂಳೆಗಳು ಮೃದುವಾಗುತ್ತವೆ. ಕೆಲವೊಮ್ಮೆ ಗಂಭೀರತೆ ಪ್ರಾಣಾಪಾಯಕ್ಕೆ ತಳ್ಳುತ್ತದೆ. ಹೀಗಾಗಿ ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ.

ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ ಮಧುಮೇಹತಜ್ಞ ಡಾ.ನವೀನ ಚರಂತಿಮಠ, ಡಾ.ಅನೀಲ ಸತ್ಯರಡ್ಡಿ, ಡಾ.ಬಸವರಾಜ ಅಂಕಲಕೋಟಿ, ಡಾ.ದೀಪಕ, ಡಾ.ಗೋಪಾಲ ಬಜಾಜ ಮತ್ತು ಅರವಳಿಕೆ ತಜ್ಞ ಡಾ.ಅನೀಲ.ಜಿ, ಡಾ.ರಂಗನಾಥ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಡಾ.ಧನಂಜಯ ಮತ್ತು ಡಾ.ಅರ್ಪಿತಾ ಅವರುಗಳನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಎಸ್.ಎನ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ಮತ್ತು ವೈದ್ಯಕೀಯ ಅಧಿಕ್ಷಕಿ ಡಾ.ಭುವನೇಶ್ವರಿ ಯಳಮಲಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net