ದಾವಣಗೆರೆ: ಅಲ್ಲಿ ಯುವತಿಯರ ವಯ್ಯಾರದ್ದೇ ಗುಂಪು ಚರ್ಚೆ, ಬಣ್ಣ-ಬಣ್ಣದ ಸೀರೆ ತೊಟ್ಟ ಹಾಗೂ ಸಾಂಪ್ರದಾಯಿಕ ವೇಷಧಾರಿಗಳ ಕಣ್ಣಿನ ಸಂಭಾಷಣೆ, ಮೇ ಫ್ಲವರ್‌ಗಳಂತೆ ಕ್ಯಾಂಪಸ್ ಸುತ್ತ ಹರಿದಾಡಿದ ಆ್ಯಂಡ್ರಾಯ್ಡ್ ಮೊಬೈಲ್‌ಗಳು..
ದಾವಣಗೆರೆಯ ಎವಿಕೆ ಪದವಿ ಕಾಲೇಜಿನಲ್ಲಿ ಶನಿವಾರ ಕಂಡುಬಂದ ದೃಶ್ಯಾವಳಿಗಳಿವು. ಪಾರಂಪರಿಕ ಸಾಂಸ್ಕೃತಿಕ ದಿನದಂಗವಾಗಿ ದೇಸೀ ಕಲರವ ಕಾರ್ಯಕ್ರಮದಲ್ಲಿ ಕಾಲೇಜಿನ 2 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿ ಸಂಭ್ರಮಿಸಿದರು.
ಕೊಡವ, ಕೂರ್ಗ್, ಲಂಬಾಣಿ, ಮರಾಠಿ, ಉತ್ತರ ಕರ್ನಾಟಕ ಮೊದಲಾದ ವೇಷಭೂಷಣಗಳಲ್ಲಿ ಮಿಂಚಿದ ಹುಡುಗಿಯರು ಸೆಲ್ಫೀ ನೋಟದಲ್ಲಿ ಮುಳುಗಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ದೇಸೀ ಸೊಗಡಿನ ಇಪ್ಪತ್ತಕ್ಕೂ ಹೆಚ್ಚು ನೃತ್ಯಗಳಿಗೆ ವಿದ್ಯಾರ್ಥಿನಿಯರು ಹೆಜ್ಜೆಯಾದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಜತೆಯಾದರು. ಜಾನಪದದ ಗುಂಗಿನೊಂದಿಗೆ ಎಲ್ಲರ ಗಮನ ಸೆಳೆದರು.
ರೇಷ್ಮೆ ಸೀರೆಯುಟ್ಟ ಕೆಲವರು ನಾಜೂಕಿನಿಂದಲೇ ಕಾಲೇಜಿನಲ್ಲಿ ಓಡಾಡಿದರು. ಗ್ರಾಮೀಣ ಜನಜೀವನದ ಬಿಂಬಿಸುವ ಗುಡಿಸಲು, ಬಾವಿ, ಜೋಕಾಲಿ, ದನದ ಕೊಟ್ಟಿಗೆ ಹೀಗೆ ವೈವಿಧ್ಯಮಯ ಮಾದರಿಗಳು ಕಾರಿಡಾರಿನಲ್ಲಿ ಅನಾವರಣಗೊಂಡಿದ್ದವು. ಬಾವಿಯಲ್ಲಿ ನೀರು ಸೇದುವ, ಜೋಕಾಲಿ ಜೀಕುವ ಸಡಗರವೂ ಕಂಡುಬಂತು.
*ಮೂಲ ಸಂಸ್ಕೃತಿ ಉಳಿವಿನ ಪ್ರಯತ್ನ
ಆರಂಭದಲ್ಲಿ ಕಾರ್ಯಕ್ರಮ ಕುರಿತು ಮಾತನಾಡಿದ ಎವಿಕೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಪ್ರೊ. ಕಮಲಾ ಸೊಪ್ಪಿನ್, ಭಾರತ ಬಹು ಸಂಸ್ಕೃತಿಗಳ ನಾಡು. ವಿವಿಧತೆಯಲ್ಲಿ ಏಕತೆ ಕಾಣುವ ನೆಲ ನಮ್ಮದು. ಇಲ್ಲಿನ ಪಾರಂಪರಿಕ ದಿವ್ಯ ಸಂಸ್ಕೃತಿ ಆಧುನಿಕ ಜೀವನದ ಭರಾಟೆಯಲ್ಲಿ ರೂಪಾಂತರಗೊಳ್ಳುತ್ತಿದೆ. ಮೂಲ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮಹತ್ವದಾಗಿದೆ ಎಂದರು.
ನಮ್ಮ ನಾಡು ಹಲವಾರು ಧರ್ಮ, ಮತ, ಪಥ, ಭಾಷೆ, ಸಂಸ್ಕೃತಿ ಹೊಂದಿದೆ. ಅದರ ಪ್ರತಿರೂಪವನ್ನು ಕಾಲೇಜಿನ ವಿದ್ಯಾರ್ಥಿನಿಯರು ಮರು ಸೃಷ್ಟಿ ಮಾಡಿದ್ದಾರೆ. ಇದರೊಂದಿಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಅರಿಯಬೇಕಿದೆ ಎಂದು ಹೇಳಿದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರವಿ ಬಣಕಾರ ಮಾತನಾಡಿ ನಿಮ್ಮಲ್ಲರ ಸಡಗರ ಸಂಭ್ರಮ, ನಮ್ಮ ಸಂಸ್ಕೃತಿ ಮತ್ತಷ್ಟು ಎತ್ತರಕ್ಕೆ ಬೆಳೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ. ಆರ್.ಆರ್. ಶಿವಕುಮಾರ್, ಪ್ರೊ. ಆರ್.ಸಿ. ಗೌಡ, ಪ್ರೊ. ಪ್ರಭಾವತಿ ಎಸ್.ಹೊರಡಿ, ಡಾ. ರಣಧೀರ, ಸಾಂಸ್ಕೃತಿಕ ಸಮಿತಿ ಸಂಯೋಜಕಿ ಡಾ. ಆರ್.ಜಿ ಕವಿತಾ, ಸಾಂಸ್ಕೃತಿಕ ಸಮಿತಿ ಸದಸ್ಯರಾದ ಡಾ. ಎಚ್.ಎಂ.ಲೋಹಿತ್, ಡಾ. ದಿವ್ಯಾ ಟಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಎಂ. ಸಂಗೀತಾ, ಎಚ್.ಎಚ್. ಸ್ಮಿತಾ, ಐಶ್ವರ್ಯಾ ಇತರರಿದ್ದರು.
ಪ್ರಾರ್ಥನಾ ಮತ್ತು ತಂಡದವರು ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪಿ.ವಿಶ್ವನಾಥ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಸಂಯೋಜಕಿ ಡಾ. ಆರ್.ಜಿ. ಕವಿತಾ ಪ್ರಾಸ್ತಾವಿಕ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಜೆ.ಜಿ. ನಾಗವೇಣಿವಂದಿಸಿದರು. ಎಸ್.ಕೆ. ಸಹನಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಸೃಷ್ಟಿ ಮತ್ತು ಭೂಮಿಕಾ ನೆರವೇರಿಸಿದರು