

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ದೇಶದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪ್ಯಾಕ್ಸ್) ಗಣಕೀಕೃತ ವ್ಯವಸ್ಥೆಗೆ 2022-23ನೇ ಸಾಲಿನಲ್ಲಿ ಮುಂದಡಿ ಇಟ್ಟಿದ್ದ ಕೇಂದ್ರ ಸರ್ಕಾರ, ಅದಕ್ಕೀಗ ಫೆ.24 ರಂದು ಚಾಲನೆ ನೀಡಲಿದೆ.
ಸುದೀರ್ಘ ಐತಿಹ್ಯವುಳ್ಳ ಸಹಕಾರಿ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಿ ಹೆಜ್ಜೆ ಎಂದೇ ಹೇಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಪ್ಯಾಕ್ಸ್‌ಗಳ ಕಂಪ್ಯೂಟರೀಕರಣ ವ್ಯವಸ್ಥೆ ಉದ್ಘಾಟಿಸಲಿದ್ದಾರೆ.
ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಪ್ಯಾಕ್ಸ್‌ಗಳನ್ನು ಗಣಕೀಕೃತ ಜಾಲದೊಳಗೆ ತರುವುದರೊಂದಿಗೆ ಸಹಕಾರಿ ಕ್ಷೇತ್ರದ ಬಲವರ್ಧನೆ ಉದ್ದೇಶ ಕೇಂದ್ರದ್ದಾಗಿದೆ.
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಆಶಯದಂತೆ ನಬಾರ್ಡ್ ಸಹಕಾರದೊಂದಿಗೆ 2022-23ನೇ ಸಾಲಿನಿಂದ 5 ವರ್ಷಗಳ ಅವಧಿಯೊಳಗೆ ದೇಶದ ಎಲ್ಲ 95 ಸಾವಿರ ಸಂಘಗಳನ್ನೂ ಗಣಕೀಕೃತ ಜಾಲದೊಳಗೆ ತರಲು ಕೇಂದ್ರ ಯೋಜನೆ ರೂಪಿಸಿದೆ. ಒಟ್ಟು ಸಹ ಕಾರ ಸಂಘಗಳ ಪೈಕಿ ಕ್ರಿಯಾಶೀಲ 63 ಸಾವಿರ ಸಂಘಗಳು, 351 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಹಾಗೂ 33 ರಾಜ್ಯ ಸಹಕಾರ ಬ್ಯಾಂಕ್‌ಗಳು ಕೋರ್‌ಬ್ಯಾಂಕಿಂಗ್‌ಗೆ ಸೇರ್ಪಡೆಯಾಗಲಿವೆ.
ಇದಕ್ಕಾಗಿ ಕೇಂದ್ರ ಸಹಕಾರ ಸಚಿವಾಲಯ ಕಾರ‌್ಯದರ್ಶಿ, ರಾಜ್ಯ ಮಟ್ಟದಲ್ಲಿ ಸಹಕಾರ ಇಲಾಖೆ ಪ್ರಧಾನ ಕಾರ‌್ಯದರ್ಶಿ ಹಾಗೂ ಜಿಲ್ಲಾ ಮ ಟ್ಟದಲ್ಲಿ ಡಿಸಿ ನೇತೃತ್ವದಲ್ಲಿ ಕ್ರಮವಾಗಿ ರಾಷ್ಟ್ರ, ರಾಜ್ಯಹಾಗೂ ಜಿಲ್ಲಾ ಮಟ್ಟದಲ್ಲಿ, ಉಸ್ತುವಾರಿ ಮತ್ತು ಅನುಷ್ಠಾನ ಸಮಿತಿ ರಚಿಸಲಾಗಿತ್ತು.
ಪ್ರತಿ ಸಂಘಕ್ಕೆ ಅಂದಾಜು 3.91 ಲಕ್ಷ ರೂ.ಗಳಂತೆ, 2516 ಕೋಟಿ ರೂ. ವೆಚ್ಚದೊಂದಿಗೆ ಪ್ಯಾಕ್ಸ್‌ಗಳಲ್ಲಿ ಉದ್ಯಮ ಸಂಪನ್ಮೂಲ ಯೋಜನೆ(ಇಆರ್‌ಪಿ) ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ದೇಶದಲ್ಲಿ ಹಲವು ಸಹಕಾರ ಸಂಘಗಳು ಗಣಕೀಕರಣಗೊಂಡಿದ್ದರೂ, ಇಆರ್‌ಪಿ ತಂತ್ರಾಂಶದೊಂದಿಗೆ ಗಣಕೀಕೃತ ವ್ಯವಸ್ಥೆ ಜಾರಿಯಾಗುತ್ತಿದೆ.
ಇದಕ್ಕಾಗಿ ಕೇಂದ್ರ ಸರ್ಕಾರ 1528 ಕೋಟಿ ರೂ., ನಬಾರ್ಡ್ 252 ಕೋಟಿ ರೂ. ಹಾಗೂ ಆಯಾ ರಾಜ್ಯಗಳು ತಮ್ಮ ಪಾಲಿನ ಖರ್ಚು ಭರಿಸುತ್ತಿವೆ. ಉದ್ಘಾಟನೆ ವೇಳೆಗೆ ಅಂದಾಜು 17 ಸಾವಿರ ಪ್ಯಾಕ್ಸ್‌ಗಳು ಇಆರ್‌ಪಿ ತಂತ್ರಾಂಶದೊಂದಿಗೆ ವಹಿವಾಟು ನಡೆಸಲು ಸಜ್ಜಾಗಿವೆ.
ಯಾರೆಲ್ಲ ಭಾಗವಹಿಸುತ್ತಾರೆ?: ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಅರ್ಜುನ್ ಮುಂಡಾ, ಪಿಯೂಶ್ ಗೋಯಲ್ ಹಾಗೂ ಬಿ.ಎಲ್. ವರ್ಮಾ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ದೇಶದ ಎಲ್ಲ ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ರಾಜ್ಯಸಹಕಾರಿ ಬ್ಯಾಂಕ್‌ಗಳ ಸಹಕಾರಿ ಧುರೀಣರು, ಅಧಿಕಾರಿಗಳು ಸಮಾರಂಭವನ್ನು ಸಾಕ್ಷೀಕರಿಸಲಿದ್ದಾರೆ.
*ಕೋಟ್
ಚಿತ್ರದುರ್ಗ ಜಿಲ್ಲೆಯಲ್ಲಿ ಸಕ್ರಿಯ 154 ಸಂಘಗಳ ಪೈಕಿ 148 ಪ್ಯಾಕ್ಸ್‌ಗಳ ಕಂಪ್ಯೂಟರೀಕರಣಕ್ಕೆ ವ್ಯವಸ್ಥೆಯಾಗಿದೆ. ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಪಾಲ್ಗೊಳ್ಳುತ್ತಿಲ್ಲ. ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್ ಹಾಗೂ ನಾನು ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇವೆ.
ಇಲ್ಯಾಸ್ ಉಲ್ಲಾ ಷರೀಫ್, ಎಂಡಿ, ಡಿಸಿಸಿ ಬ್ಯಾಂಕ್, ಚಿತ್ರದುರ್ಗ