

ಬೆಳಗಾವಿ: ಪೋಷಣ್ ಅಭಿಯಾನ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಮಕ್ಕಳು, ಹದಿಹರಿಯದ ಬಾಲಕಿಯರು, ಗರ್ಭಣಿಯರು ಮತ್ತು ಹಾಲುಣಿಸುವ ತಾಯಿಂದಿರಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ. ಶಶಿಕಾಂತ ಮುನ್ಯಾಳ ಹೇಳಿದರು.
ಪೋಷಣ್ ಅಭಿಯಾನ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಚಗಾಂವ ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
2018ರ ಮಾ. 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ರಾಜಸ್ಥಾನದ ಜುನುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೋಷಣ ಅಭಿಯಾನವು ಭಾರತದಲ್ಲಿ ಅಪೌಷ್ಟಿಕತೆ ದೂರ ಮಾಡುವ ಗುರಿ ಹೊಂದಿದೆ ಎಂದರು.
ಎನ್.ಒ. ಚೌಗಲೆ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಜನರು ಶಕ್ತಿಯುತ ಆಹಾರ ಸೇವಿಸದೆ, ಬಾಯಿ ರುಚಿಯ ಪೊಟ್ಟಣ ಆಹಾರ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ರೋಗಗಳನ್ನು ನಾವೇ ಆಹ್ವಾನ ಮಾಡಿಕೊಳ್ಳುತ್ತಿದ್ದೇವೆ. ಸತ್ವಯುತ ಆಹಾರ ಸೇವಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ರಕ್ತ ಹೀನತೆಯಿಂದ ಶಿಶು ಮತ್ತು ತಾಯಿ ಮರಣ ಆಗುತ್ತದೆ. ಅನಿಮೀಯಾ ಮುಕ್ತ ಭಾರತ ನಿರ್ಮಾಣ ಆಗಬೇಕು. ಸರಿಯಾದ ರೀತಿಯಲ್ಲಿ ಊಟೋಪಚಾರ ಮಾಡಬೇಕು. ಅವಶ್ಯಕತೆ ಇರುವಾಗ ತಪ್ಪದೆ ಆಸ್ಪತ್ರೆಗೆ ಹೋಗಬೇಕು ಎಂದು ತಿಳಿಸಿದರು.
ಉಚಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸ್ಮಿತಾ ಗೋಡಸೆ ಮಾತನಾಡಿ, ಪೋಷಣ ಅಭಿಯಾನ ಮಾಹೆಯಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೋಷಣ ಅಭಿಯಾನದ ದಿನದಂದು ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಸೀಮಂತ ಕಾರ್ಯಕ್ರಮ, ಜನನಿ ಸುರಕ್ಷಾ ಯೋಜನೆ ಅರಿವು ಕಾರ್ಯಕ್ರಮ, ಜನನಿ-ಶಿಶು ಸುರಕ್ಷಾ ಯೋಜನೆಯನ್ನು ಪ್ರತಿ ಗ್ರಾಮ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಗರ್ಭಿಣಿಯರು ಇದರ ಉಪಯೋಗ ಪಡೆಯಬೇಕು. ಸತ್ವಯುತ ಆಹಾರ ಸೇವಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಜಾವೇದ ಜಮಾದಾರ, ಎಲ್.ಡಿ. ಚೌಗಲೆ, ವೈ. ಕಾಂಬಳೆ, ಎಂ. ಪಾಟೀಲ, ರೂಪಾ ಗೊಂದಳಿ, ಯೋಗಿತಾ ದೇಸಾಯಿ, ಬಳವಂತರಾವ ದೇಸಾಯಿ, ನಾಗರತ್ನ ಸಂಜಯ ಕೊರಡೆ, ಗ್ರಾಮದ ನಾಗರಿಕರು, ಗರ್ಭಿಣಿಯರು ಇದ್ದರು.
ವಿಶ್ವ ರೇಬಿಸ್ ದಿನಾಚರಣೆ ಹಾಗೂ ವಿಶ್ವ ಹೃದಯ ದಿನಾಚರಣೆಗಳ ಕುರಿತು ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳ ತರಬೇತಿ ಕೇಂದ್ರದ ಪ್ರಾಚಾರ್ಯ ಸಾವಿತ್ರಿ, ಡಿ.ಎನ್.ಒ. ಶಬೀರಾ ಟಪಾಲ, ಶುಶ್ರೂಷಣಾಧಿಕಾರಿ ಆರಿಫಾ ಉಪನ್ಯಾಸ ನೀಡಿದರು. ಸಿ.ಜಿ. ಅಗ್ನಿಹೋತ್ರಿ ಸ್ವಾಗತಿಸಿದರು. ಬಸವರಾಜ ಯಲಿಗಾರ ವಂದಿಸಿದರು.