ಪೌಷ್ಟಿಕ ಆಹಾರ ಬಳಸಿ

nrp posti
ಎನ್.ಆರ್.ಪುರ ಅಂಬೇಡ್ಕರ್ ಭವನದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಕ್ಕಳು ತರಕಾರಿ ಹಾರಗಳನ್ನು ಹಾಕಿಕೊಂಡು ಗಮನ ಸೆಳೆದರು.
Published on

ಎನ್.ಆರ್.ಪುರ: ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮ ನಡೆಯುತ್ತಿದ್ದು ಗರ್ಭಿಣಿಯರು, ಬಾಣಂತಿಯರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಪಪಂ ಅಧ್ಯಕ್ಷೆ ಜುಬೇದಾ ಮನವಿ ಮಾಡಿದರು.

ಪಟ್ಟಣದ ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲ ತಾಯಂದಿರು ಮಕ್ಕಳನ್ನು ಕಡ್ಡಾಯವಾಗಿ ಅಂಗನವಾಡಿಗಳಿಗೆ ಕಳಿಸಬೇಕು. ಪ್ರತಿ ಮಕ್ಕಳು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಹಕರಿಸಬೇಕು ಎಂದರು.

ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಕ್ಷಮಾ ಮಾತನಾಡಿ, ಹುಟ್ಟಿದ ಮಗುವಿಗೆ ಕಡ್ಡಾಯವಾಗಿ ತಾಯಿಹಾಲು ನೀಡಬೇಕು. 6 ತಿಂಗಳವರೆಗೆ ತಾಯಿಹಾಲು ಮಾತ್ರ ನೀಡಬೇಕು. 6 ತಿಂಗಳ ನಂತರ ತಾಯಿಹಾಲಿನ ಜತೆಗೆ ಪೂರಕ ಆಹಾರ ನೀಡಬೇಕು. ತಾಯಿಹಾಲು ಅಮೃತ ಸಮಾನವಾಗಿದೆ. ಗರ್ಭಿಣಿಯರು ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಸೀಬೆ ಹಣ್ಣು ಮುಂತಾದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಸಲಹೆ ನೀಡಿದರು.

ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಸಾವಿತ್ರಮ್ಮ ಮಾತನಾಡಿ, ಸ್ಥಳೀಯವಾಗಿ ಸಿಗುವ ಪೌಷ್ಟಿಕ ಆಹಾರ ಸೇವಿಸಬೇಕು. ಅಂಗನವಾಡಿಗಳಲ್ಲಿ ಸಿಗುವ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಡಿಎಸ್‌ಎಸ್ ಮುಖಂಡರಾದ ಡಿ.ರಾಮು, ವಾಲ್ಮೀಕಿ ಶ್ರೀನಿವಾಸ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್, ಆರೋಗ್ಯ ಇಲಾಖೆಯ ಡೈಸಿ, ಪಪಂ ಸಮುದಾಯ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಗೌಡ, ಅಂಬೇಡ್ಕರ್ ನಗರದ ಅಂಗನವಾಡಿ ಕಾರ್ಯಕರ್ತೆ ರಮಾ, ಸಹಾಯಕಿ ವೀಣಾ, ಮಂಜುಳಾ, ಶಿವರತ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net