

ಚಿತ್ರದುರ್ಗ: ನಗರಸಭೆಯ ಪೌರಾಯುಕ್ತರು ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದು, ಹಾಲಿ ಸದಸ್ಯರಿಗೂ ಗೌರವ ನೀಡುತ್ತಿಲ್ಲ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಹತ್ತಾರು ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜೂ. 24ರಂದು ಕೌನ್ಸಿಲರ್ ಸಭಾಂಗಣದಲ್ಲಿ ನಗರಸಭೆಗೆ ಸಂಬಂಧಿಸದ ವ್ಯಕ್ತಿಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಂತೇ ಮೈದಾನದಲ್ಲಿರುವ ಮಾರುಕಟ್ಟೆ ಕುರಿತು ಸದಸ್ಯರಿಗೆ ತಿಳಿಸದೆಯೇ ಸಭೆ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪೌರಾಯುಕ್ತರು ಕಾಯ್ದೆ ಗಾಳಿಗೆ ತೂರಿ ತಮ್ಮ ಅಧ್ಯಕ್ಷತೆಯಲ್ಲಿ ಈ ರೀತಿ ಅನೇಕ ಸಭೆ ನಡೆಸುತ್ತ ಬಂದಿದ್ದಾರೆ. ಇದು ಕಾನೂನು ಬಾಹಿರ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದರು.
ನಗರಸಭೆ ಸದಸ್ಯರಾದ ಹರೀಶ್, ಶ್ರೀನಿವಾಸ್, ಬಿ. ಸುರೇಶ್, ಶ್ವೇತಾ ವೀರೇಶ್, ಅನುರಾಧಾ, ಭಾಗ್ಯಮ್ಮ, ರೋಹಿಣಿ, ಮುಖಂಡರಾದ ಚಾಲುಕ್ಯ ನವೀನ್, ರವಿಕುಮಾರ್ ಇತರರಿದ್ದರು.